‘ರುಬಾಯಿ’ ಅಥವಾ ‘ರುಬಾಯತ್’ ಎಂದು ಪ್ರಸಿದ್ದವಾದ ಸಾಹಿತ್ಯ ಪ್ರಕಾರ ನಾಲ್ಕು ಸಾಲುಗಳನ್ನು ಒಳಗೊಂಡ ಚೌಪದಿ.ಇದು ಛಂದಸ್ಸಿಗೆ ಸೇರಿದ ಸಾಹಿತ್ಯ ಪ್ರಕಾರವಾಗಿದೆ. ಇದನ್ನು ಹೆಚ್ಚಾಗಿ ಬಳಸಿದವರೆಂದರೆ ಉಮರ್ ಖಯ್ಯಾಮ್‍ ಬಹುಮುಖ ವಿದ್ವಾಂಸನಾದ ಈತ ಸಾಹಿತ್ಯ ಜ್ಯೋತಿಷ್ಯ, ಬೀಜಗಣಿತ, ಕ್ಷೇತ್ರಗಣಿತ, ಬೌತ ವಿಜ್ಞಾನಗಳಲ್ಲಿ ಪರಿಣಿತನಾಗಿದ್ದ. ಇಂಗ್ಲೆಂಡಿನ ಕೇಂಬ್ರಿಜ್‍ ವಿಶ್ವವಿದ್ಯಾನಿಲಯದಲ್ಲಿ ಎಜೆ ಆರ್ಬರಿ ಸಂಶೋದಿಸಿ ಸಂಪಾದಿಸಿದ ಉಮರನ ಕೃತಿಗಳಲ್ಲಿ 400 ಕ್ಕೂ ಹೆಚ್ಚು ರುಬಾಯಿಗಳಿವೆ.ಈ ರೀತಿಯ ಪದ್ಯಗಳನ್ನು ಪರ್ಷಿಯಾದಲ್ಲಿ ಜಾರಿಗೆತಂದವನು ‘ಷೇಕ್‍ ಅಬುಲ್‍ ಸೈಯದ್‍ ಬಿನ್‍ ಅಬುಲ್‍ ಖಯಿರ್ ಎನ್ನುವ ಸೂಫಿ.’
ಉಮರ್ ಖಯ್ಯಾಮನ ಗೀತೆಗಳನ್ನು ಕನ್ನಡಕ್ಕೆ ತಂದವರು ಡಿ.ವಿ.ಗುಂಡಪ್ಪ ನವರು. ಅದು ಉಮರನ ಒಸುಗೆ ಎಂದೇ ಪ್ರಸಿದ್ದಿಪಡೆದಿದೆ. ಮೂಲ ಇಂಗ್ಲೀಷಿನ ಎಡ್ವರ್ಡಫಿಟ್ಸ್‍ ಜೆರಾಲ್ಡ.
ಉದಾ:ಆಡುವವನೆಸೆವಂತೆ ಬೀಳ್ವ ಚೆಂಡಿಗದೇಕೆ
ಎಡ ಬಲಗಳೆಣಿಕೆ, ಸೋಲ್‍ ಗೆಲುವುಗಳ ಗೋಜು?
ನಿನ್ನನಾರಿತ್ತಲೆಸೆದಿಹನೊ ಬಲ್ಲವನಾರು
ನೆಲ್ಲಬಲ್ಲವನವನು ಬಲ್ಲನೆಲ್ಲವನು
ಈ ಮೇಲಿನ ರುಬಾಯತ್‍ನ್ನು ಭಾಷಾಂತರಿಸಿದ್ದರಿಂದ ಅದು ಭಾವವನ್ನು ಸ್ಷಷ್ಟವಾಗಿ ಹೊರಸೂಸುತ್ತದೆ ಆದರೆ ಅದರಲ್ಲಿ ಪ್ರಾಸ ಅಕ್ಷರದ ನಿಯಮ ಒಳಗೊಂಡಿಲ್ಲ.

ಒಟ್ಟಿನಲ್ಲಿ ರುಬಾಯತ್‍ ಎನ್ನುವುದು ನಾಲ್ಕು ಪಾದಗಳುಳ್ಳ ಸಣ್ಣ ಪದ್ಯ, ಮೂರನೆ ಪಾದವನ್ನು ಬಿಟ್ಟರೆ ಉಳಿದ ಪಾದಗಳ ಅಂತ್ಯಾಕ್ಷರಗಳು ಪ್ರಾಸಬದ್ದವಾಗಿರುವ ಕವಿತಾರಚನೆ. ಈ ರಚನೆ ಸೂಕ್ಷ್ಮ ರೀತಿಯ ಭಾವ ಪ್ರಕಾಶಕ್ಕೆ ಅನುಕೂಲವೆಂಬುದು ಅರಿತ ಉಮರ್ ಅದನ್ನೇ ತನ್ನ ಮಾಧ್ಯಮನ್ನಾಗಿ ಬಳಸಿಕೊಂಡ. ರಚನೆ ಹೇಗಿದ್ದರೇನು ಅಂತರಂಗವನ್ನು ಕಲಕುವ ಬುದ್ದಿಯನ್ನು ಕೆರಳಿಸುವ ಭಾವಶಕ್ತಿ ಕವಿಗಿದ್ದರಲ್ಲವೇ ತಂತ್ರವೂ ಅಮರವಾಗುವುದು?

ರುಬಾಯತ್‍ ಎನ್ನುವುದು ಖ್ಯಾತಿಪಡೆಯಲು ಭಾವಸಂಪನ್ನರಾದ ಉಮರನೇ ಕಾರಣ. ರುಬಾಯತ್ ಗಳಲ್ಲಿ ಹಲವಾರು ವಿಷಯಗಳು ಒಳಗೊಳ್ಳುತ್ತವೆ, ಹಲವು ಸಲ ಒಂದೇ ರುಬಾಯತ್‍ ಸ್ವಯಂಪೂರ್ಣವೆನಿಸುವುದೂ ಉಂಟು. ಅನೇಕ ಸಲ ಹತ್ತುಹನ್ನೆರಡು ರುಬಾಯತ್ ಗಳಿಂದ ಒಂದು ಅಭಿಪ್ರಾಯ ಸ್ವಷ್ಟಗೊಳ್ಳುತ್ತದೆ. ಹೀಗೆ ಭಾವಕ್ಕೆವಿಚಾರಕ್ಕೆ ಅನುಗುಣವಾಗಿರು ರುಬಾಯತ್ ಗಳ ಸಂಖ್ಯೆ ದೇವರು, ಜಗತ್ತು, ಸಂಸಾರ, ಬಂಧನ, ಮುಕ್ತಿ, ಸೃಷ್ಠಿ, ಸ್ಥಿತಿ, ಲಯ, ಜಗಳ, ಸ್ನೇಹ, ಪ್ರೇಮ, ಕೋಪ, ಹೆಂಡ, ಹೆಂಡದಂಗಡಿ, ಸೂರ್ಯೋದಯ, ಕತ್ತಲು ಹೀಗೆ ಅನೇಕ ವಿಚಾರಗಳು ಕವಿಯ ಬಾವಕ್ಕನುಗುಣವಾಗಿ ರುಬಾಯಿ ಹೊರಹೊಮ್ಮುತ್ತದೆ. ರುಬಾಯತ್‍ನಲ್ಲಿ ಮುಖ್ಯವಾಗಿ ಸಂಜ್ಞೆ ಅಥವಾ ಪ್ರತಿಮೆಗಳ ಮೂಲಕ ಕವಿ ತನ್ನ ಅನುಭವವನ್ನು ವ್ಯಕ್ತಪಡಿಸುತ್ತಾನೆ. ಓದಲು ಒಂದು ರೀತಿ ಇದ್ದರೆ ಒಳ ಅರ್ಥ ಬೇರೆಯಾಗಿರುತ್ತೆ.

ರುಬಾಯಿ ಇದು ನಾಲ್ಕು ಸಾಲಿನ ಛಂದಸ್ಸು ಪ್ರಕಾರವಾಗಿದ್ದು ಪ್ರತಿಸಾಲಿನ ಅಕ್ಷರಗಳು ಸಮನಾಗಿರಬೇಕು. ಅಂದರೆ ಮೊದಲ ಸಾಲಿನಲ್ಲಿ ಅಕ್ಷರಗಳಿದ್ದರೆ ಉಳಿದೆಲ್ಲಾ ಸಾಲುಗಳು ಎಂಟು ಅಕ್ಷರಗಳನ್ನೇ ಹೊಂದಿರಬೇಕು. ಒಂದು ವೇಳೆ ಮೊದಲ ಸಾಲು 12 ಅಕ್ಷರ ಒಳಗೊಂಡಿದ್ದರೆ ಉಳಿದೆಲ್ಲವೂ ಅಷ್ಟೇ ಅಕ್ಷರಗಳನ್ನು ಹೊಂದಿರಬೇಕು. ಆದರೆ ರುಬಾಯಿಗೆ ಅಕ್ಷರಗಳ ಮಿತಿಯಿಲ್ಲ ನೀವು ಮೊದಲ ಸಾಲನ್ನು ಎಷ್ಟು ಅಕ್ಷರಗಳಿಂದ ಬೇಕಾದರೂ ಶುರು ಮಾಡಬಹುದು ಆದರೆ ಉಳಿದ ಮೂರು ಸಾಲುಗಳು ಮೊದಲ ಸಾಲಿನ ಅಕ್ಷರಗಳ ಸಂಖ್ಯೆಯನ್ನು ಅನುಸರಿಸುತ್ತವೆ.
ರುಬಾಯಿಯ 12 ಮತ್ತು 4ನೇ ಸಾಲು ಪ್ರಾಸಬದ್ದವಾಗಿರುತ್ತವೆ 3ನೇ ಸಾಲು ಪ್ರಾಸವನ್ನು ಅನುಸರಿಸದೆ ಉಳಿದೆಲ್ಲಾ ಸಾಲುಗಳಿಗೆ ಪೂರಕವಾಗಿದ್ದು ಇಡೀ ಪದ್ಯದ ಸತ್ವವನ್ನು ಇದು ಒಳಗೊಂಡಿರುತ್ತದೆ. 4 ನೇ ಸಾಲು ಎಡೀ ಪದ್ಯದ ಸಾರವನ್ನು ಒಳಗೊಂಡಿರುತ್ತದೆ.
ನನ್ನ ಎರಡು ರುಬಾಯತ್ ಗಳನ್ನು ಕೆಳಗೆ ಉದಾಹರಣೆಗೆ ಕೊಟ್ಟಿದ್ದೇನೆ :

1} ಕೆಲಘಳಿಗೆ ಆಡಲೆಂದುಬಿಟ್ಟು
ಚಂದದ ಬೊಂಬೆಗೆ ಬಣ್ಣದಾಬಟ್ಟೆ
ಅಸ್ಥಿತ್ವವಿರುವುದು ಕ್ಷಣಕಾಲ
ಅವನಿಚ್ಚೆತೀರೋತನಕವಷ್ಟೆ

2} ಆತ್ಮದಸೊಡರುಬೆಳಗುತಿದೆತನುವಿನಲಿ
ಕ್ಷಣ ಕ್ಷಣವೂ ವಿಷಯಗಳಿಗೆಹರಿಯುತಲಿ
ತೈಲ ತೀರುವ ಮುನ್ನವೇ ಪ್ರಜ್ವಲಿಸು ಜಗಕೆ
ಕಾಂತಿ ಮರೆಯಾಗದೆ ನೀನಳಿದರೂ ಉಳಿಯಲಿ..

           🔆🔆🔆

✍️ ಶ್ರೀಮತಿ. ಗಿರಿಜಾ ಮಾಲಿಪಾಟೀಲ
ವಿಜಯಪುರ.