ಕೇಳೆ ಮುದ್ದಿನ ಹುಡುಗಿ ನೀನಿಲ್ಲಾಂದ್ರೆ..
ಈ ನನ್ನ ಹೃದಯ ಗ್ಯಾಸ್ಕೆಟ್ಟಿಲ್ಲದ ಕುಕ್ಕರು
ಪ್ರೀತಿ ಪರಮಾನ್ನ ಬೇಯೋದೆ ಇಲ್ಲ..!

ಕೇಳೆ ಮುನಿಸಿನ ಬೆಡಗಿ ನೀನಿಲ್ಲಾಂದ್ರೆ..
ಈ ಮನಸು ಲಾಡಿಯಿಲ್ಲದ ನಿಕ್ಕರು
ಮೊಗದ ಮೇಲೆ ನಗೆ ನಿಲ್ಲೋದೆ ಇಲ್ಲ.!

ಕೇಳೆ ನಲುಮೆ ಬೆಡಗಿ ನೀನಿಲ್ಲಾಂದ್ರೆ
ಈ ಬದುಕು ಪೆಟ್ರೋಲಿಲ್ಲದ ಸ್ಕೂಟರ್ರು
ಒಂದಡಿನೂ ಮುಂದೆ ಓಡೋದೆ ಇಲ್ಲ..!

ಕೇಳೆ ಒಲುಮೆ ಹುಡುಗಿ ನೀನಿಲ್ಲಾಂದ್ರೆ.
ಈ ಬಾಡಿ ಕರೆಂಟಿಲ್ಲದ ಮೋಟಾರ್ರು
ನುಡಿಯಂಗು ಇಲ್ಲ ಮಿಡಿಯಂಗು ಇಲ್ಲ.!

ಕೇಳೆ ಪ್ರೇಮದ ಪ್ಯಾರಟ್ಟು ನೀನಿಲ್ಲಾಂದ್ರೆ
ಈ ಜೀವ ಬ್ಯಾಟರಿಯಿಲ್ಲದ ಫೋನು
ಜೀವಂತಿಕೆ ಸಿಗ್ನಲ್ಲು ಇರೋದೆ ಇಲ್ಲ.!

ಕೇಳೆ ದೈವದಾ ಗಿಫ್ಟು ನೀನಿಲ್ಲಾಂದ್ರೆ
ಈ ಪ್ರಾಣ ಅಕ್ವೇರಿಯಮ್ಮಿಲ್ಲದ ಮೀನು
ಕ್ಷಣವೂ ಉಸಿರಾಡಲು ಸಾಧ್ಯಾನೇ ಇಲ್ಲ.!

ಕೇಳೇ ನನ್ನ ಪ್ರೀತಿಯ ವ್ಯಾಲೆಂಟೈನು
ನಾ ಸಾಯೋಗಂಟ ಮಾಡ್ಕೊಂಡು ಬಿಡೆ
ನಿನ್ನ ಹೃದಯದಾಗೆ ನನ್ನ ಕ್ವಾರಂಟೈನು.!

ಕೇಳೆ ಎದೆ ತುಂಬಾ ನಿನ್ನದೇ ರಂಗು
ಕೇಳೆ ತಲೆ ತುಂಬಾ ನಿನ್ನದೇ ಗುಂಗು
ನನ್ನ ಉಸಿರುಸಿರಿಗೂ ನಿನ್ನದೇ ಹಂಗು.!
ಹಾಡ್ಬಿಡೆ ಇಂದು ಅನುರಾಗದ ಸಾಂಗು.!

             🔆🔆🔆

      ✍️ ಎ.ಎನ್.ರಮೇಶ್. ಗುಬ್ಬಿ.