ನಾನು ಸತ್ಯದ ಹಿಂದೆಯೋ ನೇಪಥ್ಯದ ಹಿಂದೆಯೋ ಬಗೆಹರಿಯುತಿಲ್ಲ
ನಾನು ಅಂದದ ಹಿಂದೆಯೋ ಮಕರಂದದ ಹಿಂದೆಯೋ ಬಗೆಹರಿಯುತಿಲ್ಲ
ನಾಲಿಗೆಯ ಒಡಂಬಡಿಕೆ ಮೆಚ್ಚಿ ನಾನಿಲ್ಲಿವರೆಗೂ ಬಂದಿದ್ದು
ನಾನು ಇತಿಹಾಸದ ಚಪಲದ ಹಿಂದೆಯೋ ಭೂತದ ಹಿಂದೆಯೋ ಬಗೆಹರಿಯುತಿಲ್ಲ
ಕೋಟಿ ವಾಗ್ದಾನಗಳು ಗಲ್ಲಾಪೆಟ್ಟಿಗೆಯಲ್ಲಿ ಕೊಳೆಯುತ್ತಿವೆ
ನಾನು ಮಾತಿನ ಶೂನ್ಯದ ಹಿಂದೆಯೋ ಜೋತಿರ್ಲಿಂಗದ ಹಿಂದೆಯೋ ಬಗೆಹರಿಯುತಿಲ್ಲ
ಹೆಜ್ಜೆಗೂ ನಾಚಿ ಹೆಜ್ಜೆ ಪರಿಹಾಸ ಮಾಡುತ್ತಿದೆ ಎಲ್ಲಿ ದೃಢಹೆಜ್ಜೆಯೆಂದು
ನಾನು ಹುಡುಕಾಟದಬ್ಬರದ ಹಿಂದೆಯೋ ದಕ್ಕದ ರಹಸ್ಯದ ಹಿಂದೆಯೋ ಬಗೆಹರಿಯುತಿಲ್ಲ
ನಾನೆಂಬ ಸಂಕೀರ್ಣ ಸತ್ಯ ತಿಳಿಯುವ ಬಡಿವಾರ ಹೇಗಾದೀತು “ಜಾಲಿ”
ನಾನು ಅಹಂ ಭಾವದ ಹಿಂದೆಯೋ ಒಪ್ಪಿಕೊಳ್ಳುವ ಮೋಹದ ಹಿಂದೆಯೋ ಬಗೆಹರಿಯುತಿಲ್ಲ.
🔆🔆🔆. ✍️ -ವೇಣು ಜಾಲಿಬೆಂಚಿ, ರಾಯಚೂರು.