ಬಿಡದ ಮಾಯೆಯೆನಲು ನಾ ಅಲ್ಲಮನಲ್ಲ
ಕಳೆ ತಂದ ಆತ್ಮಸಂಗಾತಿಯೆನ್ನಲು ಅಕ್ಕನಲ್ಲ
ಉಳಿದು ಐಕ್ಯವಾಗಿರಲು ಬಸವಣ್ಣನಲ್ಲ
ಅಳಿದ ನಾನೇ ನೀನೆನ್ನಲು ಶಂಕರರಲ್ಲ
ಇರುವೆವು ನಾವಿಬ್ಬರೆನಲು ಮಧ್ವರಲ್ಲ
ಹಮ್ಮಿನ ನಾನಾರೆಂಬುದು ಅರಿವಿಲ್ಲ
ಅಂತರಾಳದ ಅರಿವಿನೊಳಗೆ ನಾನೆಂಬುದಿಲ್ಲ
ಸತ್ಯದ ಮಾರ್ಗದಿ ತುಂಬಿದೆಯಲ್ಲ
ಬಿಮ್ಮಿನ ನಾನೆಂಬುದನಳಿಯುವ ಸೊಲ್ಲ
ನಡೆದು ನಡೆಸುವವನೇ ಭವಿಗಳ ಗೊಲ್ಲ
ನನ್ನೊಳಗಿರುವುದೆಲ್ಲ ನಿಗೂಢವೂ ಸಲ್ಲ
ನೀನೆಂಬುವನೆಲ್ಲವನೂ ಬಲ್ಲ
ಅಹಮಿಕೆಯ ಸಾಂಗತ್ಯವದು ಹೊಲ್ಲ
ಆದರೂ ನಾ ಬಿಟ್ಟು ಯಾವುದಿಲ್ಲ ?
ಸಕಲವೂ ಅದರೊಳಗಿದೆಂದವನೇ ಮಲ್ಲ
ನಾನೇ ಎಲ್ಲರೂ ಮೆಚ್ಚಿ ಸವಿಯುವ ಬೆಲ್ಲ
ಹೊರತು ತೋರು ಬಾ ದಾರಿಯ ನಲ್ಲ
ಎಂದುಕೊಂಡಿರುವೆವು ಸಾವೆಂದೂ ನಮಗಿಲ್ಲ
ಹೊರಡುವ ಮೆರವಣಿಗೆಯೂ ನಮಗಲ್ಲ
ಉಳಿಯಬೇಕೆನ್ನುವ ಹಾದಿ ತಪ್ಪಿಹೋಯಿತಲ್ಲ
ಕಂಡ ಕನಸಿನರಮನೆಗಳು ಕಣ್ಣೆದುರೆ ಕರಗುತಿವೆಯಲ್ಲ
ಇದ್ದೂ ಇಲ್ಲದಂತಿರುವುದೇ ಅಕಾಲ ಸತ್ಯವಾಯಿತಲ್ಲ
ಮರಣವೇ ಮಹಾನವಮಿಯೆಂದ ಮೇಲೆ ನಾನಿಲ್ಲ
ಒಪ್ಪಿ ತಬ್ಬಿದರೂ ಇವ ನಮ್ಮವನಲ್ಲ
ನಾನು ಮಾತ್ರ ಎಲ್ಲರವನು ಹೌದಲ್ಲ
ಅವನು ಇಲ್ಲದವನು ನನಗೆ ಬೇಕಿಲ್ಲ
ಎಲ್ಲವಿರುವವನು ನಾ ಹಿರಿಯಣ್ಣ ಜಗಕೆಲ್ಲ
ಉಣ್ಣುವ ಋಣವೆಲ್ಲವೂ ನನ್ನದೇ ಏಕಲ್ಲ
ಅರಿವಾಯಿತೀಗ ಎತ್ತಿಕೊಂಡಿರುವುದು ಜಗ ನನ್ನನಲ್ಲ
🔆🔆🔆
✍️ ಶ್ರೀ ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು, ಬೀಳಗಿ