ಕವಿರತ್ನ ಕಾಳಿದಾಸನ ಮೇಘದೂತವು
ನೀನಲ್ಲ||
ರವಿವರ್ಮ ಚಿತ್ರಿಸಿದ ಕಲಾಕುಂಚವು
ನೀನಲ್ಲ||

ಸ್ವರ್ಗಲೋಕದ ಚಲುವೆಯೆಂದು
ಉಬ್ಬಿಹೋದೆ|
ಶಿಲ್ಪಿಯು ಕೆತ್ತಿರುವ ಆ ಸೌಂದರ್ಯವು
ನೀನಲ್ಲ||

ಹೊಗಳಿಕೊಳ್ಳಬೇಡ ಅಹಂಮಿನಲ್ಲಿ
ನಲ್ಲೆ|
ಮದನ ತಿಲಕದಲ್ಲಿನ ಸತ್ವಸಾರವು
ನೀನಲ್ಲ||

ಧರೆಯಲ್ಲಿ ದೊರೆಸಾನಿಯಾದೆ ಎಂದು
ಬೀಗಿದೆ|
ಸುರಲೋಕದ ಅಕ್ಷಯ ಕಾಮಧೇನುವು
ನೀನಲ್ಲ||

ಅಭಿನವನ ಕಾವ್ಯದ ಪುಟಗಳಲ್ಲಿ
ಹೊಳೆಯಲಿಲ್ಲ|
ಮೌರ್ವಿಯಲಿ ನಲಿವ ಸುಮಬಾಣವು
ನೀನಲ್ಲ||

🔆🔆🔆
✍️ ಶಂಕರಾನಂದ ಹೆಬ್ಬಾಳ. ಕನ್ನಡ ಉಪನ್ಯಾಸಕರು, ರಾಂಪೂರ