1.
ದೀಪವ ದಿಟ್ಟಿಸುತ ನೋಡಬಹುದು.. ನೇಸರನ ನೇರದಿ
ನೋಡಲಾದೀತೆ?
2.
ಬೀದಿ ದೀಪವಾಗಲು
ಬಯಸಿದರೆ ನಾವು..
ಇರುಳೆಲ್ಲ ಒಂಟಿಯಾಗಿ
ಹಾದಿ ಬೆಳಗಲು
ಬದ್ದರಿರಲೇಬೇಕು.!
ಕಲ್ಲೇಟು ಸ್ವೀಕರಿಸಲು
ಸಿದ್ದರಿರಲೇಬೇಕು.!
3.
ಈ ಲೋಕದಲಿ
ದೀಪ ಉರಿಸಿ
ಬದುಕಿದವರಿಗಿಂತ
ದೀಪ ಆರಿಸಿ
ಬದುಕಿದವರೆ ಹೆಚ್ಚು,!
ಬೆಳಕ ನೀಡುತ
ಹೊಳೆದವರಿಗಿಂತ
ಕತ್ತಲೆಯಲಿ
ಕೊಳೆತವರೆ ಹೆಚ್ಚು.!
4.
ದೀಪವಾದರೆ ಜನರು
ಹತ್ತಿರ ಬರುವರು
ತೈಲ ಸುರಿವರು
ಬತ್ತಿ ಎತ್ತುವರು
ಸುಳಿಗಾಳಿಯೆದುರು
ಕರ ಒಡ್ಡುವರು
ಸಂಕಟ ಸಂಕಷ್ಟಕೆ
ಜೊತೆಯಾಗುವರು.!
ರವಿಯಾದರೆ ಜನರು
ಸನಿಹ ಬರಲೊಲ್ಲರು
ತಾಪಕೆ ಹೆದರುವರು
ಪ್ರತಾಪಕೆ ಬೆಚ್ಚುವರು
ಕುಶಲೋಪರಿಯಿರಲಿ
ಒಳಗಣ ವಿಸ್ಫೋಟ
ಸ್ಫೋಟಗಳಿಗು ಸಹ
ತಲೆಕೆಡಸಿ ಕೊಳ್ಳರು.!
🔆🔆🔆.
✍️ ಶ್ರೀ ಎ.ಎನ್.ರಮೇಶ್, ಗುಬ್ಬಿ.