ಚುಕ್ಕೆ ಹೊದ್ದ ಆಕಾಶದ
ಸೆರಗು ಬಿಡು ಮಾರಾಯ ಇದೊಂದು ಬಾರಿ
ಜೋರಾಗಿ ಮಳೆ ಸುರಿಯುತಿದೆ
ಅದೇ ಮತ್ತ್ಯಾತರ ಧ್ವನಿ
ಟಪಕ ಟಪಕ….
ಅದೇ ಮಾಮೂಲಿ
ಅದೇ ಗುಡಸಲಿನ ಪಡಸಾಲೆಯ ನಟ್ಟ ನಡುವೆ
ಆಕಾಶದ ಹನಿ ಇಣಿಕಿದೆ
ಪ್ರತಿ ಹನಿಗೂ ತನ್ನದೆ ಕಥೆ ವ್ಯಥೆ
ಬಿದ್ದಾದ ಮೇಲೆ ಯಾರು ಕೇಳಬೇಕಿಲ್ಲಿ….
ಅವರವರಿಗೆ ಅವರದೆ
ಊಯಿಲಿನ ಚಿಂತೆ
ಕಣ್ಣ ಕಂಬನಿಗಳ
ಲೆಕ್ಕವೇ ಸಿಗದಿದ್ದಾಗ
ಸುರಿದ ಹನಿಗಳ ಖಾತೆ ತೆರೆಯುವವರು ಯಾರು
ಕಂಬನಿ ಮಳೆಹನಿ
ಒಂದಾಗಿಹೋದ
ಕಥಾನಕಗಳು
ಸದ್ಯ ಪ್ರಕ್ಷುಬ್ಧ ಅಲೆಗಳ
ಹೊಡೆತಕ್ಕೆ ಸಿಕ್ಕ
ಹಾಯಿದೋಣಿಗಳು ಮಾತ್ರ
ಕಾಯುತ್ತಿದ್ದೇನೆ
ಯಾರದೋ ಎದೆಗೆ ನಾಟಿದ ಮುಳ್ಳು ನಾಜೂಕಿನಿಂದ ತೆಗೆಯಬೇಕಿದೆ
ಅರ್ಥ ಶತಮಾನ ದಾಟಿದ
ಅವನ ಪ್ರೇಮದ ನಿವೇದನೆಗೆ
ಏನು ಹೇಳಲಿ
ಮೌನವೋ ಮಾತು ಒಂದು ದಾರಿಯಿಲ್ಲ
ಜೋರಾಗಿ ಸುರಿದ ಆಕೆ ಸದ್ಯ ಹನಿಯಾಗಿದ್ದಾಳೆ….
ಪಡಸಾಲೆಯ ನಡುವಿನ
ಟಪಕ್ ಶಬ್ದ ನಿಧಾನವಾಗಿದೆ….
ಅದರೆ ಅವನೆದೆಯ ಬಡಿತ ಜೋರಾಗಿದೆ
🔆🔆🔆
✍️ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ
ರಾಣಿ ಚೆನ್ನಮ್ವಿಶ್ವವಿದ್ಯಾಲಯ,ಬೆಳಗಾವಿ