ಎರಡು ಕಂಗಳ ನೆದರು ಮೂರು ಸಾಲನು ಬರೆದು
ನೂರು ಮಾತನು ನುಡಿಯೆ ಸಾವಿರದ ಭಾವ|
ಮೆರೆವ ಸಿರಿ ಸೌಂದರ್ಯದುಪಮೆಗಳೆಲ್ಲ
ಸರತಿಯಲಿ ಬರುತಿಹವು ಅರಸಿ ನಿನ್ನ||
ತನುವ ಚೆಲುವಿಗೆ ಗಗನ ಹೂವ ಮಳೆಯನು ಸುರಿಸೆ
ಮನದಿ ಕ್ಷಣ ಪಲ್ಲವಿಸಿದೆ ಸಾಮಗಾನ|
ಬನದ ಬಲೆಯಲಿ ಪವನ ನಲುಗಿ ನವೋನ್ಮಾದ
ಇನ ಕಿರಣ ಮಂಟಪದಿ ಭುವನ ದೈವ ಸನ್ನಿಧಾನ||
ಮಧುರ ಮಧು ಮೃದು ಲಾಸ್ಯ ಮದನಿಕೆಯ ಬಳುಕಿನಲಿ
ಮಂದಗಮನೆಯು ಮೈದುಂಬಿ ಮುದದಿ|
ಹದ ಹಸಿರ ಚಾದರವ ಹೊದ್ದ ಸದನದ ಕದ ತೆರೆಯೆ
ಪದ ಪಂಕ್ತಿ ಪದರಗಳ ಪಂದ್ಯವಿಲ್ಲಿ||
ಕಲರವವು ಪಲ್ಲವಿಸೆ ಫಲಪುಷ್ಪ ತಳಿರಿನೊಳು
ತಾಳಮೇಳದ ಝೇಂಕಾರವಿಲ್ಲಿ
ಕಲ್ಪನೆಯ ತಲ್ಪದಲಿ ಭಾವ ಕಲಶವು ತುಳುಕಿ
ಚೆಲ್ವಿಕೆಗೆ ಶರಣಾಗುತಿವೆ ಕಲೆ ಕಾವ್ಯ ಶಿಲ್ಪವಿಲ್ಲಿ
🔆🔆🔆
✍️ ಶ್ರೀಮತಿ ವತ್ಸಲಾ ಶ್ರೀಶ, ಕೊಡಗು🌺