ಇಂದು ಅಲ್ಲೆಲ್ಲೋ ಪ್ರೇಮಿಗಳ ದಿನವಂತೆ
ಕರದಿ ಕರ ಪಿಡಿದು ಕುಣಿಯುತಿಹರಂತೆ
ಒಲವಿನಾ ನುಡಿಗಳ ಮಳೆ ಸುರಿಸಿಹರಂತೆ
ಅನುರಾಗ ಸ್ವರಗಳ ಸುಧೆ ಹರಿಸಿಹರಂತೆ
ಮಾಧವನೇಕೆ ತಿಳಿಯನು ಈ ರಾಧೆವ್ಯಥೆ.!

ಯಮುನೆಯೂ ವೈಯ್ಯಾರದಿ ಬಳುಕುತ
ಪುಳಕದಿ ಹರಿದಿಹಳು ಸಾಗರನ ಸೇರಲು
ದುಂಬಿಗಳೂ ಸಂಭ್ರಮದಿ ಝೇಂಕರಿಸುತ
ಸುಮದೆಡೆ ಸುಳಿದಿಹರು ಮಧು ಹೀರಲು
ಈ ಕೃಷ್ಣನೇಕೆ ಅರಿಯನು ರಾಧೆ ಒಡಲು.!

ಸಂಜೆಯಾದರೂ ಆ ಶ್ಯಾಮನ ಸುಳಿವಿಲ್ಲ
ಗೋಧೂಳಿಯಾದರೂ ಆ ಗೋಪಾಲನಿಲ್ಲ
ದೂರದಲ್ಲೆಲ್ಲೂ ಮುರಳಿನಾದ ಕೇಳುತಿಲ್ಲ
ಬರುವ ಸೂಚನೆ ಕುರುಹುಗಳು ಕಾಣುತಿಲ್ಲ.
ಕನಿಷ್ಟ ಮೇಘಸಂದೇಶವನೂ ಕಳಿಸಲಿಲ್ಲ.!

ಸಮರಾಭ್ಯಾಸವೋ? ಸಂಧಾನ ತಯಾರಿಯೋ?
ದೈತ್ಯ ಸಂಹಾರವೋ? ಧರ್ಮ ಸಂಸ್ಥಾಪನೆಯೋ?
ಶಿಷ್ಟರ ರಕ್ಷಣೆಯೋ? ದುಷ್ಟರ ಶಿಕ್ಷಣೆಯೋ?
ಅವನಿಗವನದೇ ನಿತ್ಯ ನೂರು ಕಾರ್ಯಭಾರ
ಕೇಳಿಸುವುದೇ ಇಲ್ಲ ರಾಧೆಯಾಂತರ್ಯ ಸ್ವರ.!

ಧ್ವನಿಸುತಿದೆ ಗೋಪ-ಗೋಪಿಕೆಯರ ಸಂಭ್ರಮ
ನೋಡಿ ಅಣಕಿಸುತಿಹನು ನನ್ನ ಆ ಚಂದ್ರಮ.
ಅವಿರತ ದುಡಿವ ಯೋಧರ, ದೇಶ ಸೇವಕರ
ಮನೆರಾಧೆಯರಿಗೆಲ್ಲಿದೆ ಪ್ರೇಮದಿನದ ಆಚರಣೆ.?
ಕಂಬನಿಯೊಂದಿಗೆ ಬರೀ ನೆನಪುಗಳಷ್ಟೇ ಸ್ಮರಣೆ .!

   ‌‌‌‌‌‌           🔆🔆🔆

✍️ ಶ್ರೀ ಎ.ಎನ್.ರಮೇಶ್. ಗುಬ್ಬಿ.