ಮುರಿದುಬಿದ್ದ ಮನೆಯಲೊಂದು
ಹರಿದ ಬಟ್ಟೆ ತೊಟ್ಟ ಮುದುಕಿ
ತಿರುಪೆಯೆತ್ತಿ ಬಾಳಬಂಡಿ ಸಾಗಿಸಿದ್ದಳು||
ಕರುಣೆಯಿರುವ ಲೋಗರೆಲ್ಲ
ತಿರುಪೆಯೆತ್ತೊ ಮುದುಕಿ ಕಂಡು
ಧರೆಯ ವೃದ್ದೆಯನ್ನು ನೋಡಿ ಸುಮ್ಮನಾದರು||.

ಸುತರನೆಲ್ಲ ಹೊರಗೆಹಾಕಿ

ಪತಿಯ ಜೊತೆಗೆ ಬಾಳಸವೆಸಿ
ಮತಿಯ ಕೆಟ್ಟ ವನಿತೆಯಂತೆ ಲೋಕದಲ್ಲಿಯೆ||
ಚ್ಯುತಿಯ ಬಾರದಂತೆ ತಾನು
ಯತಿಯ ತೆರದಿ ಭಿಕ್ಷೆ ಬೇಡಿ
ಸತಿಯು ಪತಿಯ ಜೊತೆಯಕೂಡಿ ಬಾಳಲಲ್ಲಿಯೆ||.

ಬಡವರಾದ ದಂಪತಿಗಳು

ಕಡೆಯತನಕ ತಿರಿದು ತಿಂದು
ನುಡಿದು ಮೃಡವ ಹರನ ದಿವ್ಯ ಪಾದದಲ್ಲಿಯೆ||
ಗುಡಿಯ ಕದವ ತೆರೆದು ನೋಡಿ
ಬಿಡದೆ ಕರವ ಸಾವಿನಲ್ಲು
ಹಿಡಿದುಕೊಂಡು ಹರನ ಚರಣ ಸೇರಿಹೋದರು||.

ದುರುಳತನವ ತೋರ್ಪ ಸುತರು

ಹರಣಪೋಪ ಸಮಯದಲ್ಲಿ
ಪರರ ತೆರದಿ ದೂರ ನಿಂತು ಶವವ ನೋಡಲು||
ಮರುವ ಚಣದಿ ಕಣ್ಣ ನೀರು
ಸುರಿಸಿಕೊಂಡು ಪಾದಹಿಡಿದು
ಗರುವ ಬಡೆದ ಮನುಜರಂತೆ ಜನನಿ ಚರಣದಿ||

‌‌ ‌ 🔆🔆🔆

✍️ ಶ್ರೀ ಶಂಕರಾನಂದ ಹೆಬ್ಬಾಳ

ಕನ್ನಡ ಉಪನ್ಯಾಸಕರು, ರಾಂಪೂರ