ನಮ್ಮನ್ನು ಅಮ್ಮನ
ಕಂಬನಿ ಕರಗಿಸುವಷ್ಟು
ಅಪ್ಪನ ಬೆವರಹನಿ
ಕೊರಗಿಸುವುದೇ ಇಲ್ಲ.!
ಅಮ್ಮನ ಹಳೇಸೀರೆ
ಕನಲಿಸಿ ಕಾಡುವಷ್ಟು
ಅಪ್ಪನ ಮಾಸಿದಂಗಿ
ಹರಿದ ಬನಿಯನ್ನು
ಸವೆದ ಚಪ್ಪಲಿಗಳು
ಕಾಡುವುದೇ ಇಲ್ಲ.!
ಬುವಿಯಂತೆ ಸದಾ
ಮಡಿಲಲ್ಲಿಟ್ಟುಕೊಂಡು
ಮುದ್ದಿಸುವ ಅಮ್ಮನ
ಸಂಕಟ ನೋವುಗಳು
ನಮ್ಮನ್ನು ನರಳಿಸುವಷ್ಟು..
ರವಿಯಂತೆ ನಿತ್ಯವೂ
ಬೆಳಕಿಟ್ಟು ಕಾಯುವ
ಅಪ್ಪನೊಳಗಿನ ತಲ್ಲಣ
ಸ್ಫೋಟ ವಿಸ್ಫೋಟಗಳು
ನರಳಿಸುವುದೇ ಇಲ್ಲ.!
ಅಡಿಗಡಿಗೆ ಸ್ಪಂದಿಸುವ
ವiಮತೆ ಅಕ್ಕರೆಗಳಿಂದ
ಅಮ್ಮ ದೈವವಾಗುತ್ತಾಳೆ.!
ಮೌನದಿ ಮೂಗೆತ್ತಿನಂತೆ
ದುಡಿಯುತ್ತಲೇ ಇರುವ
ಅಪ್ಪನೆಂದು ದೈವವಾಗದೆ
ದೂರವೇ ಇದ್ದುಬಿಡುತ್ತಾನೆ.!
ತೆರೆಯಲ್ಲೆ ಮರೆಯಲ್ಲೇ..
ಹಾಗೇ ಉಳಿದುಬಿಡುತ್ತಾನೆ.!!
🔆🔆🔆
✍️ ಶ್ರೀ.ಎ.ಎನ್.ರಮೇಶ್. ಗುಬ್ಬಿ.