ನನ್ನಮ್ಮನ ಕೈ ಅಡುಗೆಗೆ ತಾರೀಫು ಕೊಟ್ರೆ ಸಾಕು, ಆಕೆ ಅಷ್ಟಕ್ಕೇ ಕಾದಿದ್ದವಳಂತೆ ನನ್ನಮ್ಮ, ನನ್ನತ್ತೆ ಮಾಡಿದ ಅಡುಗೆಯ ರುಚಿ ಸವಿಯ ಬೇಕಿತ್ತು ನೀವು, ಏನಿಲ್ಲ ಅಂದರೆ ಒಂದು ಕೆಸುವಿನ ಬೇರಿನ ಚಟ್ನಿಯಾದರೂ ಅರೆದು ಅದಕ್ಕೊಂದು ಒಗ್ಗರಣೆ ಕೊಟ್ಟರೆ ಮುಗಿಯಿತು, ಎಂಥ ಪರಿಮಳ! ಅದೆಂತಾ ರುಚಿ ಅಂತೀಯ ಅಂತ ಮಾತು ಶುರು ಮಾಡುತ್ತಾಳೆ. ಆಕೆ ಹೇಳುವುದು ಇಷ್ಟೇ, ಅಡುಗೆ ಹೇಗೇ ಇರಲಿ ಕೊನೆಗೊಂದು ಬೀಳುವ ಒಗ್ಗರಣೆಯ ಮೇಲೆಯೇ ಅಡುಗೆಯ ರುಚಿಯ ಮೂಲ ತತ್ವ ಅಡಗಿದೆ, ಅದಕ್ಕೂ ಕೈ ಗುಣ ಬೇಕು ಅನ್ನುವುದು ಆಕೆಯ ನಿಲುವು. ಅಡುಗೆಯ ಬಗ್ಗೆ ಅಷ್ಟೊಂದು ಒಲವಿಲ್ಲದ ನಾನು ಅದರ ಕುರಿತು ಕೂಲಂಕಷವಾಗಿ ಅಧ್ಯಯನ ಮಾಡಲು ಆಸಕ್ತಿಯಿಲ್ಲದಿದ್ದರೂ ನನ್ನಮ್ಮ, ನನ್ನತ್ತೆಯ ಒಗ್ಗರಣೆಯ ಘಮಲು ನಾಸಿಕಕ್ಕೆ ಬಡಿದು ಈ ಹೊತ್ತಿನಲ್ಲೂ ಅಘ್ರಾಣಿಸಿ ಕೊಳ್ಳುವಂತೆ ಮಾಡುತ್ತದೆ. ಅವರು ಒಗ್ಗರಣೆ ಹಾಕುವಾಗ ಎಬ್ಬಿಸುವ ಸದ್ದೇ ಸಾಕು, ಸುಮ್ಮಗೆ ಕೂತವರನ್ನು ದಢಕ್ಕನೆ ಊಟಕ್ಕೆ ಎಬ್ಬಿಸಿ ಬಿಡುತ್ತದೆ. ನಾಭಿಯಾಳದಿಂದ ಹಸಿವೊಂದು ಉದ್ಭವಗೊಳ್ಳುತ್ತದೆ. ಆದರೆ ನನ್ನ ಮನೆ ಮಂದಿ ನಾನು ಊಟಕ್ಕೆ ಕರೆದು ಕರೆದೂ ಸುಸ್ತು ಹೊಡೆಯುವಲ್ಲಿಯವರೆಗೂ ಯಾರೂ ಮಿಸುಕಾಡುವುದೇ ಇಲ್ಲ. ಬಹುಷ: ನಾನು ಅಪರೂಪಕ್ಕೊಮ್ಮೆ ಹಾಕುವ ಒಗ್ಗರಣೆ ಮೆಲ್ಲನೆ ’ಚೊಂಯ್’ ಅಂತ ಹೇಳುವ ಸದ್ದು ಒಗ್ಗರಣೆಯ ಸೌಟಿಗಾದರೂ ಕೇಳಿಸಿತೋ ಏನೋ ಅಂತ ನನಗೀಗ ಅರ್ಥವಾಗಿ ಸಶಬ್ಧವಾಗಿ ನಗುತ್ತೇನೆ.
ನಾನು ಕಾಲೇಜಿಗೆ ಹೋಗುತ್ತಿದ್ದ ವೇಳೆಯಲ್ಲಿ ನಾವು ಮನೆ ಮಕ್ಕಳು ಮೂರು ಜನ ಬಾಡಿಗೆ ಮನೆಯಲ್ಲಿದ್ದುಕೊಂಡು, ನಾವೇ ಅಡುಗೆ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆವು. ನನಗೆ ಗೊತ್ತಿರುವ ಅಡುಗೆಯೆಂದರೆ, ಅನ್ನ ಮತ್ತು ತರಕಾರಿ ಬೇಯಿಸಿ ಅದಕ್ಕೆ ಮಸಾಲೆ ಹುಡಿ ಉದುರಿಸಿ ಮಾಡುವ ಒಂದು ಸಾರು ಅಷ್ಟೇ. ಅದರಾಚೆಗೆ ಅಡುಗೆಯ ಯಾವ ಮೂಲ ಜ್ಞಾನವೂ ಗೊತ್ತಿರಲಿಲ್ಲ, ಮತ್ತು ಮಾಡು ವಷ್ಟು ಪುರುಸೊತ್ತು ಕೂಡ ಇರಲಿಲ್ಲ. ದಿನಾ ಅಡುಗೆ ಮಾಡೋಕೆ ಬೇಜಾರು ಹತ್ತಿ ಹೆಚ್ಚಿನ ದಿನ ಅನ್ನ ಉಪ್ಪಿನಕಾಯಿಯಲ್ಲಿಯೇ ನಮ್ಮ ಮೃಷ್ಟಾನ್ನ ಭೋಜನ ಸಮಾಪ್ತಿಗೊಳ್ಳುತ್ತಿತ್ತು. ಒಂದು ದಿನ ಕಾಲೇಜಿನಿಂದ ಬಂದ ಸುಸ್ತಿ ನಲ್ಲಿ ಮಾಮೂಲಿ ಇದೇ ಅನ್ನ ಸಾರು ಮಾಡೋಕೆ ಉದಾಸೀನ ಬಂದು ನಾನು, ತಮ್ಮ, ತಂಗಿ ಊಟ ಮಾಡದೆ ಹಾಗೇ ಮಲಗಿದ್ದೆವು. ನಮ್ಮ ಹಸಿವು ಇಂಗಿ ಹೋಗಿತ್ತು. ಅಷ್ಟರಲ್ಲೇ ಪಕ್ಕದ ಮನೆಯಿಂದ ಒಗ್ಗರಣೆ ಸದ್ದು ಕೇಳಿ ಅಡುಗೆಯ ಪರಿಮಳ ಹಾಗೇ ಹಾದು, ನಮ್ಮ ಮನೆಯೊಳಗೂ ಆವರಿಸಿ, ನಮ್ಮ ನಾಸಿಕದೊಳಗೂ ಲಗ್ಗೆಯಿಟ್ಟು ತೆಪ್ಪಗೆ ಮಲಗಿದ್ದ ನಮ್ಮಗಳ ಹೊಟ್ಟೆಯ ಹಸಿವನ್ನು ಹಾಗೇ ಬಡಿದೆಬ್ಬಿ ಸಿತ್ತು. ನನ್ನ ತಂಗಿ ಮೆಲ್ಲಗೆ ಹಸಿವು ಅಂತ ರಾಗ ಎಳೆಯೋಕೆ ಶುರು ಮಾಡಿದ್ದಳು. ನಮ್ಮ ಹಸಿವು ಉಕ್ಕಿಸಿದ್ದು ಅವರ ಮನೆಯ ಒಗ್ಗರಣೆಯ ಪರಿಮಳ ಅಂತ ನನಗೆ ಆವತ್ತು ಗೊತ್ತೇ ಆಗಿರಲಿಲ್ಲ.
ಮದುವೆಯಾದ ಹೊಸತರಲ್ಲಿ ಇನ್ನೇನು ಊಟಕ್ಕೆ ಅಣಿ ಮಾಡಬೇಕು ಅನ್ನುವಷ್ಟ ರಲ್ಲಿ ನನ್ನತ್ತೆ ಹೋಗಿ ಒಗ್ಗರಣೆ ಸೊಪ್ಪು ತೆಗೆದುಕೊಂಡು ಬಾ ಅಂದಿದ್ದರು. ಕರಿಬೇವಿಗೆ ನಮ್ಮ ಕಡೆ ಒಗ್ಗರಣೆಸೊಪ್ಪು ಅನ್ನುವುದು ನನಗೆ ತಿಳಿದಿರಲಿಲ್ಲ. ಹೊಸ ಜಾಗ, ಹೊಸ ಪರಿಸರ ಒಗ್ಗರಣೆ ಗಿಡ ಎಲ್ಲಿ ಇದೆ ಅಂತನೂ ಗೊತ್ತಿರಲಿಲ್ಲ. ಎಲ್ಲಿದೆ ಅಂತ ಮೆತ್ತಗೆ ಅತ್ತೆಯಲ್ಲಿ ಕೇಳಿದ್ದಕ್ಕೆ, ಅಗೋ ನೋಡು ಅಲ್ಲಿ ಚಾಳೆ ಮರದ ಬುಡದಲ್ಲಿದೆ ಅಂದಿದ್ದರು. ನಂಗೆ ಗಡಿಬಿಡಿಯಲ್ಲಿ ಪಕ್ಕಕ್ಕೆ ಏನೂ ಗೊತ್ತಾಗದೆ ಅಲ್ಲೇ ಪಕ್ಕದಲ್ಲಿದ್ದ ಕಾಡು ಮಲ್ಲಿಗೆ ಸೊಪ್ಪನ್ನು ಕಿತ್ತುಕೊಂಡು ಬಂದಿದ್ದೆ. ಇವೆರಡೂ ನೋಡೋಕೆ ಹೆಚ್ಚು ಕಮ್ಮಿ ಒಂದೆ ಸಮ ಇತ್ತು. ಈ ಅವಾಂತರ ನೋಡಿ, ಇವಳಿಗಿನ್ನೂ ಒಗ್ಗರಣೆ ಬೇವು ಯಾವುದು ಅಂತ ಗೊತ್ತಿಲ್ಲ ಅಂತ ಎಲ್ಲರೂ ಗೊಳ್ ಅಂತ ನಕ್ಕಿದ್ದರು. ನಾನೂ ಜೊತೆ ಸೇರಿ ನಕ್ಕು ಸುಮ್ಮನಾಗಿದ್ದೆ. ಯಾಕೆಂದರೆ ಬೇವಿನ ಗಿಡ ಗೊತ್ತೇ ಹೊರತು ಅದರ ಜೊತೆಗೆ ಒಡನಾಟ ಇರಲಿಲ್ಲ. ಹಾಗೇ ಈ ಒಗ್ಗರಣೆಗೂ ಅದಕ್ಕೂ ಇರುವ ಸಂಬಂಧ, ಈ ರೀತಿಯಾದ ಅಡುಗೆಯ ಸೂಕ್ಷ್ಮ ಪ್ರಾಥಮಿಕ ಪಾಠಗಳ್ಯಾವುದನ್ನೂ ನಾನು ಕಲಿತಿರಲಿಲ್ಲ. ಈಗ ಹಿತ್ತಲ ಮೂಲೆಯಲ್ಲಿ ಸೊಂಪಾಗಿ ಬೆಳೆಯುವ ಒಗ್ಗರಣೆ ಗಿಡ ಹೆಣ್ಮಕ್ಕಳ ಬದುಕಿಗೆ ತೀರಾ ಹತ್ತಿರವಾಗಿ ನಿಂತು ಬೆಸೆದುಕೊಂಡಿದೆಯಲ್ಲ ಅಂತ ಅನ್ನಿಸುತ್ತದೆ.
ಇನ್ನು ಸಾಮಾನ್ಯವಾಗಿ ಅವರವರ ರುಚಿಗೆ ತಕ್ಕಂತೆ, ಮಾಡುತ್ತಿರುವ ಅಡುಗೆಗೆ ಹೊಂದಿ ಕೊಂಡಂತೆ ಒಗ್ಗರಣೆಯ ವಿಧ ಅಡಗಿ ಕೊಂಡಿರುತ್ತದೆ. ಈಚೆ ಕಡೆ ತೆಂಗಿನ ಎಣ್ಣೆ ಬಳಸಿದರೆ, ಆಚೆ ಕಡೆಯವರು, ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಹೀಗೆ.. ತರವಾರಿ. ಬಹುಷ: ಆಯಾಯ ಹವಾಮಾನ ಮತ್ತು ಅಲ್ಲಿ ನೈಸರ್ಗಿಕವಾಗಿ ಯಥೇಚ್ಛವಾಗಿ ಸಿಗುವ ಎಣ್ಣೆಯನ್ನ ಒಗ್ಗರಣೆಗೆ ಬಳಸುತ್ತಾರೆ. ಕೆಲವರು ಇಂಗಿನ ಒಗ್ಗರಣೆ ಹಾಕಿದರೆ ಇನ್ನು ಕೆಲವರು ಜೀರಿಗೆ, ಮತ್ತೆ ಕೆಲವರು ಸಾಸಿವೆ. ಇದರ ಜೊತೆಗೆ ಚಿಟಿಕೆ ಸಾಸಿವೆ, ಒಣ ಮೆಣಸು ತುಂಡು, ಎರಡೆಸಳು ಬೆಳ್ಳುಲ್ಲಿ, ನಾಕು ಕರಿಬೇವು ಸೊಪ್ಪು ಬಿದ್ದರೆ ಸಾಕು ಒಂದು ಅಪೂರ್ವ ವಾದ ದೈವಿಕವಾದ ಘಮಲೊಂದು ಮುಚ್ಚಿದ ತಟ್ಟೆಯೊಳಗಿಂದ ಎದ್ದು ಮನೆಯ ಗೇಟು ದಾಟಿ ಬೀದಿ ತುಂಬಾ ಹಬ್ಬುತ್ತಾ ಹೋಗುತ್ತದೆ. ಆಗ ದಾರಿ ಹೋಕರನ್ನು ಕೂಡ ಬ್ರಹ್ಮಾಂಡ ಹಸಿವೊಂದು ಆಳದಿಂದ ಬಡಿದೆಬ್ಬಿಸದಿದ್ದರೆ ಕೇಳಿ!.
ಯಾರಾದರೂ ಅಪರೂಪದ ನೆಂಟರು ಬಂದಾಗ , ಅಥವಾ ಸಮಾರಂಭಗಳಲ್ಲಿ ಮೆಲ್ಲನೆ ಅಡುಗೆ ಮನೆಗೆ ಇಣುಕಿ ಊಟ ತಯಾರಾಯಿತಾ ಅಂತ ಅವಸರಿಸಿದರೆ ಸಾಕು, ಇನ್ನೂ ಅಡುಗೆ ತಯಾರೇ ಆಗದಿ ದ್ದರೂ ಕೂಡ ಆಯ್ತು, ಆಯ್ತು ಇನ್ನೇನು ಕೊನೇ ಸುತ್ತು ಒಗ್ಗರಣೆ ಹಾಕಿದರಷ್ಟೆ ಮುಗಿಯಿತು ಅಂತ ಮಾತಿನಲ್ಲೇ ಒಗ್ಗರಣೆ ಹಾಕಿ ಕಳಿಸಿ ಅವರನ್ನು ಮತ್ತಷ್ಟು ಕಾಯು ವಂತೆ ಮಾಡುತ್ತಾರೆ. ಇಂತಹ ಹೊತ್ತಿನಲ್ಲಿ ಕಾಯಿಸಿದಷ್ಟು ಬೋಜನಾಪ್ರಿಯರಿಗೆ ಬೋಜನದ ರುಚಿ ಹೆಚ್ಚು ಅನ್ನುವಂತದ್ದು ಬಾಣಸಿಗರಿಗೂ ಚೆನ್ನಾಗಿ ಗೊತ್ತಿದೆ. ಅಷ್ಟರಲ್ಲಿ ನೆರೆದ ನೆಂಟರು ಒಗ್ಗರಣೆ ಹಾಕುವುದನ್ನೇ ಕಾಯುತ್ತಾ ಹೊಟ್ಟೆ ಹಿಡಿದು ಕೊಳ್ಳುತ್ತಾರೆ. ಈ ಹೊತ್ತಿನಲ್ಲಿ ಘಟನೆ ಯೊಂದು ನೆನಪಾಗುತ್ತದೆ. ನಾವು ನಮ್ಮ ಸಂಬಂಧಿಕರ ಮನೆಗೆ ಹೋದಾಗ ಲೆಲ್ಲಾ ಪಕ್ಕದಮನೆಯವ ರೊಬ್ಬರು ಬನ್ನಿ, ಬನ್ನಿ ಕುಳಿತುಕೊಳ್ಳಿ ಅಂತ ಒತ್ತಾಯಿಸಿ ಮನೆಗೆ ಬರಮಾಡಿಕೊಂಡು ಅವರದ್ದು ಇವರದ್ದು ಇದ್ದ ಬದ್ದ ವಿಚಾರವೆಲ್ಲಾ ಮಾತನಾಡಿ ಕೊನೇಗೆ ನಾವು ಹೊರಟು ನಿಂತಾಗ ಊಟ ಮಾಡಿಕೊಂಡೇ ಹೋಗಿ ಇನ್ನು ಒಗ್ಗರಣೆ – ಯೊಂದು ಕೊಟ್ಟರಷ್ಟೆ ಆಯಿತು ಅಂತ ಹೇಳುತ್ತಲೇ ಊಟವೂ ಕೊಡುವು ದಿಲ್ಲ. ಒಗ್ಗರಣೆಯೂ ಹಾಕುವುದಿಲ್ಲ. ಬಹುಷ; ಅವರ ಮಾತಿಗೆ ಒಗ್ಗರಣೆ ಹಾಕಿ ಮುಗಿಸಬೇಕಿತ್ತೇನೋ ಅಂತ ನಾನೀಗ ಅದರಾಚೆಗಿನ ಅರ್ಥ ಹುಡುಕಿಕೊಂಡಿ – ದ್ದೇನೆ.
ಅದಕ್ಕೆ ನೋಡಿ, ಒಗ್ಗರಣೆಯೆಂದರೆ ಅದು ಸಾಮಾನ್ಯ ಸಂಗತಿಯಲ್ಲ. ಅದು ಅಡುಗೆ ಮನೆಗೆ ಮಾತ್ರ ಸೀಮಿತವಾದುದ್ದಲ್ಲ. ಇದರ ಅರ್ಥ ವ್ಯಾಪ್ತಿ ವಿಸ್ತಾರವಾದದ್ದು. ಸೂಕ್ಷ್ಮವಾಗಿ ಅವಲೋಕಿಸಿದರೆ ಬದುಕಿನ ಎಲ್ಲ ಸ್ತರಗಳಲ್ಲೂ ಅದು ವ್ಯಾಪಕವಾಗಿ ಪಸರಿಸಿಕೊಂಡದ್ದನ್ನ ನಾವು ಗಮನಿಸ ಬಹುದು. ನೀವು ಕೆಲವರ ಮಾತು ಕೇಳ – ಬೇಕು. ಕೇಳೋಕೆ ಅದೆಷ್ಟು ರಸವತ್ತಾ – ಗಿರುತ್ತೆ ಅಂದರೆ ಅವನು ಒಗ್ಗರಣೆ ಹಾಕುತ್ತಾ ಮಾತಾಡುವುದ ಕೇಳುವುದೇ ಚೆಂದ ಅಂತ ನಾವುಗಳು ಹೇಳುವುದು ಕೇಳಿದ್ದೇವೆ. ಅವರ ಒಗ್ಗರಣೆಯ ಮಾತು ಕೇಳುವುದಕ್ಕೂ ಅದೆಷ್ಟು ಹಸಿವು ಅಂತೀರ. ಅಂದರೆ ಇಂತಹ ಒಗ್ಗರಣೆಗೆ ಕಿವಿಯಾಗುವ ಹಸಿವೂ ಕೂಡ ಎಷ್ಟು ವಿಶಾಲವಾಗಿ ಹರಡಿಕೊಂಡಿದೆ. ಈಗ ನೋಡಿ ಬದುಕಿನ ಎಲ್ಲಾ ರಂಗಗಳಲ್ಲಿಯೂ ಒಗ್ಗರಣೆಯ ಪ್ರಯೋಗ ನಡೆಯುತ್ತಲೇ ಇದೆ. ಒಗ್ಗರಣೆಯ ಕತೆ, ಕವಿತೆ,ಸಿನೇಮಾ, ಹಾಡು, ಒಗ್ಗರಣೆಯಲ್ಲೇ ಪರಿಪಾಕಗೊಂಡು ಬರುವ ವಾರ್ತೆಗಳು, ಸುದ್ದಿಗಳು, ಹೀಗೆ ವಿಭಿನ್ನ ರೀತಿಯ ಮನರಂಜನೆಗಳಿಗೂ ಒಗ್ಗರಣೆ ಸೇರಿಸದಿದ್ದರೆ ಅವು ಯಾರನ್ನು ಮುದಗೊಳಿಸುವುದಿಲ್ಲ ಮತ್ತು ಜನಪ್ರಿಯ ವಾಗುವುದಿಲ್ಲ.
ಇಷ್ಟೆಲ್ಲಾ ಇದು ಪ್ರಾಮುಖ್ಯ ಪಡೆದು ಕೊಂಡಾಗಲೂ ಇದರ ಕುರಿತು ಒಂದು ವಿಚಾರ ನಿಮ್ಮ ಮುಂದೆ ಇಲ್ಲಿಯಾದರೂ ಧೈರ್ಯವಾಗಿ ಪ್ರಸ್ತಾಪಿಸಲೇಬೇಕು. ಯಾವಾತ್ತಾದ್ರೂ ಕೆಲಸದ ತುರ್ತಿನ ನಡುವೆ ಒಗ್ಗರಣೆ ಹಾಕದೆ ಬಡಿಸಿದರೆ ಕೆಂಡಾ – ಮಂಡಲ ಆಗುವ ಮನೆಯವರು ಅದೆಷ್ಟಿಲ್ಲ ಹೇಳಿ?. ಆದರೆ ವಿಪರ್ಯಾಸ ಎಂದರೆ ತಿಂದುಂಡು ತೃಪ್ತಿಯಿಂದ ತೇಗು ಬರಿಸಿ ಕೊಂಡು ಎದ್ದಾಗ ಒಗ್ಗರಣೆಯ ಕರಿಬೇವು, ಬೆಳ್ಳುಲ್ಲಿ, ಮೆಣಸು ಚೂರು ಎಲ್ಲವೂ ತಟ್ಟೆ ಕೊನೆಯಲ್ಲಿಯೇ ಉಳಿದು ಬಿಟ್ಟಿರುತ್ತದೆ. ಇದು ಯಾತರ ನ್ಯಾಯ?. ಇಡೀ ಊಟದ ಘಮಲಿಗೆ ಸೈ ಎನ್ನಿಸಿಕೊಂಡ ಒಗ್ಗರಣೆ ಹೀಗೆ ಪರಿತ್ಯಕ್ತವಾಗುದರ ಕುರಿತಾಗಿನ ನಮ್ಮ ಹೆಣ್ಣುಮಕ್ಕಳ ಒಳಕುದಿ ಅಷ್ಟಿಷ್ಟಲ್ಲ. ಆದರೆ ಒಳಗಿನ ಮಾತು ಹೊರಕ್ಕೆ ಬರುವುದಿಲ್ಲ. ಮಕ್ಕಳಿಗೆ ಮಾತ್ರ ಇದೇ ಸಮಯ ಅಂತ ಇದನ್ನು ತಿನ್ನದೆ ಉಳಿಸುವುದು ಯಾಕೆ? ಇದು ಕಚ್ಚುತ್ತಾ ನಿಮಗೆ ಅಂತ ಒಂದು ಮಾತು ದೊಡ್ಡಕ್ಕೆ ಹೇಳದಿದ್ದರೆ ಮಾತ್ರ ಸಮಾಧಾನ ಅನ್ನಿಸುವುದಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಅವುಗಳ ಬೇಗುದಿ ನಮಗಲ್ಲದೆ ಇನ್ಯಾರಿಗೆ ಅರ್ಥವಾಗಲು ಸಾಧ್ಯ?. ಹಾಗಾಗಿ ಒಗ್ಗರಣೆಯ ಎಲ್ಲಾ ಸಾಮಾಗ್ರಿಗಳನ್ನ ಇದು ಆರೋಗ್ಯಕ್ಕೆ ಯಾವುದೆಲ್ಲ ರೀತಿಯಿಂದ ಒಳ್ಳೆಯದು ಅಂತ ಉಪನ್ಯಾಸ ಕೊಡುತ್ತಾ ಹಠಕ್ಕೆ ಬಿದ್ದವರಂತೆ ಅವರುಗಳೇ ಜಗಿದು ತಿಂದು ತಟ್ಟೆ ಖಾಲಿ ಮಾಡುತ್ತಾರೆ. ಅವರೆಷ್ಟು ಕೇಳಿಸಿಕೊಂಡರೋ?, ಕೇಳಿಸಿದ್ದು ಅದೆಷ್ಟು ಅರ್ಥವಾಯಿತೋ? ಗೊತ್ತಿಲ್ಲ. ಆದರೆ ಹೆಣ್ಮಕ್ಕಳು ಅಷ್ಟು ಹೇಳಿ ನಿರಾಳವಾಗಿ ದ್ದಂತು ಸತ್ಯ.
ಇನ್ನು ಮತ್ತೊಂದು ಒಗ್ಗರಣೆ ಸಂಗತಿಯಿದೆ ನೋಡಿ, ಏನಾದ್ರೂ ಯಾರ ಜೊತೆಗಾದರೂ ತಾಗಿ ಬಂದು ಜೋರು ಜೋರು ಮಾತಿನ ಜಟಾಪಟಿ ಆಗುತ್ತಿರುವಾಗ ಇನ್ನೊಬ್ಬರು ಯಾರದೋ ಪರ ವಹಿಸಿಕೊಂಡು ಬಂದಾಕ್ಷಣ ಇವನೀಗ ಒಗ್ಗರಣೆ ಹಾಕೋಕೆ ಬಂದ ನೋಡು! ಅಂತ ನಮ್ಮ ಕಡೆ ಹೇಳು ವುದುಂಟು. ಒಗ್ಗರಣೆ ಅಡುಗೆ ಮನೆಯಲ್ಲಿ ಮಾತ್ರ ಅಲ್ಲ, ಮಾತಿನ ನಡುವೆಯೂ ಚರ್ಚೆಗೆ ವಿರಾಮ ಎಳೆಯೋದಿಕ್ಕೆ ಸದು – ದ್ದೇಶದಿಂದ ಬಂದರೂ ಇಂತ ಮಾತು ಹೇಳಿಸಿಕೊಂಡು ಇಲ್ಲೂ ಒಗ್ಗರಣೆ ಅವಗಣನೆಗೆ ಒಳಗಾಗುವುದೇ ಹೆಚ್ಚು. ಇದರ ಬಗ್ಗೆ ನನಗೆ ತೀವ್ರ ಆಕ್ಷೇಪವಿದೆ.
ನಮ್ಮ ಮನೆಯ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರು ಶಿಕ್ಷಕಿಯಿದ್ದರು. ಅವರಿಗೆ ಆಗಿನ್ನೂ ಮದುವೆಯಾಗಿರಲಿಲ್ಲ. ಒಬ್ಬರಿಗೇ ಅಂತ ಅದೆಷ್ಟು ಆಸ್ಥೆಯಿಂದ ಅಡುಗೆ ಮಾಡಲು ಸಾಧ್ಯ?. ಬಹುಷ: ಅವರಿಗೂ ನನ್ನಂತೆ ಅಡುಗೆ ಮನೆ ಉತ್ತರ ದಕ್ಷಿಣ ಆಗಿರಬೇಕು. ಹಾಗಾಗಿ ಅವರು ಅಡುಗೆ ಮಾಡಿದ್ದು, ತಿಂದಿದ್ದೂ ಒಂದೂ ಗೊತ್ತಾಗುತ್ತಿರಲಿಲ್ಲ. ಕೆಲವೊಮ್ಮೆ ಊರಿಂದ ಅವರಮ್ಮ ಬಂದಾಗ , ಅವರ ಮನೆಯ ಒಗ್ಗರಣೆಯ ಘ್ಹಮಲು ನಮ್ಮ ಮನೆಯ ವರೆಗೂ ಬಂದು ಅವರಮ್ಮ ಬಂದಿದ್ದಾರೆ ಅನ್ನುವುದನ್ನ ಪರಿಮಳ ಸಾಬೀತು ಪಡಿಸು ತ್ತಿತ್ತು. ಅಮ್ಮಂದಿರು, ಒಗ್ಗರಣೆ ಇವು ಯಾವತ್ತೂ ನನ್ನ ಕಾಡುವ ಸಂಗತಿಗಳು. ಈಗೀಗಲಂತೂ ಎಲ್ಲರ ಮನೆಯಲ್ಲೂ ಹಾರ್ಟು ಪೇಶೇಂಟುಗಳು ಹೆಚ್ಚಾಗಿ ಎಣ್ಣೆ ತಿಂದರೆ ಹೃದಯಕ್ಕೆ ಹಾಳು, ಕೊಬ್ಬು ಶೇಖರಣೆ ಆಗುತ್ತೆ ಅಂತ ಈಗ ಹೆಚ್ಚಿನವರು ಒಗ್ಗರಣೆ ಹಾಕುವುದನ್ನೇ ಕೈ ಬಿಟ್ಟಿದ್ದಾರೆ. ಆದರೂ ಎಲ್ಲರ ಮನೆಯಲ್ಲೂ ಒಗ್ಗರಣೆ ಹಾಕಲಿಕ್ಕೆಂದೇ ಸೌಟೊಂದು ಬೇರೆಯೇ ಇರುತ್ತದೆ. ಒಗ್ಗರಣೆ ಹಾಕಿ ಹಾಕಿ ಅದು ತನ್ನ ಹೊಳಪನ್ನು ಕಳೆದುಕೊಂಡಿದ್ದರೂ ಅದು ಕಟ್ಟಿಕೊಡುವ ಸ್ವಾದಕ್ಕೇನು ಕೊರತೆಯಿಲ್ಲ.
ಒಗ್ಗರಣೆ ಹಾಕುವುದು ಕೂಡ ಒಂದು ಕಲೆ. ಎಲ್ಲದಕ್ಕೂ ಒಂದು ಹದ ಬೇಕು. ಎಣ್ಣೆ ಹದಕ್ಕೆ ಕಾದಿರಬೇಕು, ಸಾಸಿವೆ ಚಟಪಟ ಸಿಡಿಯುವಾಗ ಉಳಿದ ಸಾಮಾನು ಉದುರಿಸಬೇಕು. ಇಲ್ಲದಿದ್ದರೆ ಒಗ್ಗರಣೆಯ ಸದ್ದಿಗೆ ಶಕ್ತಿಯೇ ಇರುವುದಿಲ್ಲ. ಹೆಚ್ಚು ಕಾದು ಸಾಸಿವೆ ಕರಕಲಾದರೆ ಕೂಡ ಆಗುವುದಿಲ್ಲ. ಇನ್ನು ಉರಿ ಹದಮೀರಿದರೆ ಬೆಂಕಿ ಹತ್ತಿ ಕೊಳ್ಳುವ ಅಪಾಯ ಕೂಡ ಇದೆ. ಅದಕ್ಕೆ ಇರಬೇಕು ಹೊರದೇಶಗಳಲ್ಲಿ ಅಡುಗೆಗೆ ಒಗ್ಗರಣೆ ಹಾಕುವ ಪರಿಪಾಠವಿಲ್ಲ. ಒಗ್ಗರಣೆ ಹಾಕುವುದರಲ್ಲಿ ನಾವುಗಳೇ ನಿಸ್ಸೀಮರು. ಒಗ್ಗರಣೆ ಹಾಕದ ಅಡುಗೆ ತಿನ್ನದೆ ಕಾಲ ವಾಯಿತು, ಗಡಿಬಿಡಿಯಲ್ಲಿ ತುಸು ಹೆಚ್ಚಿಗೆ ಎಣ್ಣೆ ಕಾದು ಹೊಗೆವಾಸನೆ ಹತ್ತಿದರೆ ಸೈರನ್ ಮೊಳಗಿಕೊಳ್ಳುತ್ತದೆ, ಅದಕ್ಕೆ ಈ ಉಸಾಬರಿ ಯನ್ನೇ ಬಿಟ್ಟಿದ್ದೇನೆ ಅಂತ ಹೊರದೇಶ – ದಲ್ಲಿರುವ ಬಂಧುಗಳು ಅವಲತ್ತುಕೊಳ್ಳು ತ್ತಾರೆ.
ಒಗ್ಗರಣೆಯ ಹದದಲ್ಲಿಯೇ ಅಡುಗೆಯ ಅಚ್ಚುಕಟ್ಟುತನ ನಿಂತಿದೆ. ಹಾಗಾಗಿ ಒಗ್ಗರಣೆಯೂ ನನಗೆ ಕವಿತೆಯಂತೆ ಅನ್ನಿಸುತ್ತದೆ. ಕಾದ ಎಣ್ಣೆಯೊಳಗೆ ಸಿಡಿದ ಸಾಸಿವೆ,ಕೆಂಪಾದ ಎಸಳು ಬೆಳ್ಳುಳ್ಳಿ, ಗರಿಗರಿ ಮೆಣಸು, ಕರಿಬೇವು ಅದೆಷ್ಟು ಭಾವಗಳನ್ನು ಬಿಟ್ಟುಕೊಟ್ಟು ತಾನೇನೂ ಅಲ್ಲವೆಂದು ಮೂಲೆ ಸರಿಯುತ್ತಿದೆಯಲ್ಲ?. ಎದೆಯೊಳಗೆ ಸಣ್ಣದೊಂದು ವಿಷಾದ. ಎಲ್ಲೋ ಒಂದು ಕಡೆ ನಾವುಗಳು ಒಗ್ಗರಣೆಯ ವಸ್ತುಗಳಾ- ದೆವಾ? ಎಷ್ಟೋ ಹೆಣ್ಣುಮಕ್ಕಳು ನಿಡುಸುಯ್ಯುತ್ತಾರೆ.
ಅದೇನೇ ಇರಲಿ. ಅಡುಗೆಯ ಒಗ್ಗರಣೆಗೂ , ಬದುಕಿಗೂ ಅದೆಷ್ಟು ಅವಿನಾಭಾವ ಸಂಬಂಧವಿದೆ?. ಬೇರೆ ಬೇರೆ ಗುಣ ಸ್ವಭಾವದ ಒಗ್ಗರಣೆಯ ಪದಾರ್ಥಗಳು ಕಾದ ಎಣ್ಣೆಯಲ್ಲಿ ಬಿದ್ದು ಪರಿಪಾಕಗೊಂಡು ಅಪೂರ್ವ ಪರಿಮಳವನ್ನು ದಕ್ಕಿಸಿ ಕೊಟ್ಟಿತ್ತಲ್ಲ?. ಬದುಕು ಅಷ್ಟೇ ತಾನೇ, ಸಂಬಂಧ ನಾನಾ ಮೂಸೆಯಲ್ಲಿ ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸುತ್ತಾ ಸಾಗಿದಾಗ ಸಂಸಾರ ರಸಸಾರವಾಗುತ್ತದೆ. ಒಗ್ಗರಣೆ ಯೆಂಬುದು ಎಲ್ಲಾ ಕಡೆಗೂ ಅನ್ವರ್ಥಕವಾಗಿ ಕೆಲಸ ಮಾಡುತ್ತದೆ. ಒಂದು ಪಾತ್ರದದ ಅನುಪಸ್ಥಿತಿಯಲ್ಲೂ ಬದುಕಿನ ನೆಲೆಯಲ್ಲಿ ಸಿಗಬೇಕಾದ ರುಚಿಗಟ್ಟು ಪ್ರಾಪ್ತವಾಗಲಾ – ರದು.
ಪಕ್ಕದ ಮನೆಯಲ್ಲಿ ಹಾಕಿದ ಒಗ್ಗರಣೆಯ ಸದ್ದೊಂದು ಈ ಪರಿಯಲ್ಲಿ ಕಾಡಿ ಎಲ್ಲಿಯ ವರೆಗೆ ನನ್ನ ಕೊಂಡೊಯ್ಯಿತು. ಅರೆ! ನಂದೂ ಅಡುಗೆ ಆಗಲೇ ಆಗಿದೆ. ಒಗ್ಗರಣೆ ಒಂದೇ ಬಾಕಿ ಈಗ. ಬನ್ನಿ ಊಟ ಮಾಡಿಕೊಂಡೇ ಹೋಗುವಿರಂತೆ.
🔆🔆🔆
✍️ ಸ್ಮಿತಾ ಅಮೃತರಾಜ್, ಸಂಪಾಜೆ
ಒಗ್ಗರಣೆಯ ಬಗ್ಗೆ ಒಗ್ಗರಣೆ ಕೊಡುತ್ತಾ ಹಾಕಿದ ಒಗ್ಗರಣೆ ಪ್ರಸಂಗ ಬಲೆ ರುಚಿಕಟ್ಟಾಗಿದೆ .ಓದುವ ಹಸಿವನ್ನು ಹೆಚ್ಚು ಮಾಡಿತು. ಸುಂದರ ಪ್ರಬಂಧ .
ಸುಜಾತಾ ರವೀಶ್
LikeLiked by 1 person
ದಿನನಿತ್ಯ ಬಳಸುವ ಒಗ್ಗರಣೆಯ ಕುರಿತಾಗಿ ಸುಂದರವಾದ ಲಲಿತ ಪ್ರಬಂಧ, ಅರ್ಥಪೂರ್ಣವಾಗಿದೆ ಹಾಗೇ ನಗೆಯನ್ನೂ ಉಕ್ಕಿಸುತ್ತದೆ 😊
LikeLike