ಇಳಿಸಂಜೆಯ ಹಣತೆ ಆರಿದೆ ತೈಲವೆಲ್ಲಾ ತೀರಿದೆ
ನಡುರಾತ್ರಿ ಒಬ್ಬಂಟಿ ಆರ್ತನಾದ ಕಾಮವೆಲ್ಲಾ ತೀರಿದೆ

ಹೊಗಳಿಕೆಗಳ ಹೂ ಮಳೆಗೆ ನಲಿದು ಕುಣಿದಿತ್ತು ಮರಳು ಮನ
ಸಹಿಸದ ಮಳೆನಿಂತ ನೀರವತೆ ಆಸೆಯೆಲ್ಲಾ ತೀರಿದೆ

ಚುಮುಗುಡುವ ಚಳಿ ಮರೆಸುವ ಸ್ಪರ್ಶ ಈಗ ಬಯಕೆ ಮಾತ್ರ
ಹೊದ್ದ ಹೊದಿಕೆಯಲಿ ಸರ್ವಸ್ವ ನೀಡಿ ಚಪಲವೆಲ್ಲಾ ತೀರಿದೆ

ಬೆಂಬಿಡದ ವಿಹಂಗಮ ಕನಸುಗಳು ಕತ್ತಲ ಗೂಡು ಸೇರಿವೆ
ಕತ್ತಲಾವರಿಸಿದೆ ಮನಕೆ ಅಗತ್ಯವೆಲ್ಲಾ ತೀರಿದೆ

ತನು ಬೇಡಿದವಗೆ ಮನವನರ್ಪಿಸಿ ಒಲವ ‘ಆರಾಧ್ಯೆ’
ಕಾದು ವಿರಹ ವೇದನೆಗೆ ಕಣ್ಣ ಕಂಬನಿಯೆಲ್ಲಾ ತೀರಿದೆ

          🔆🔆🔆

✍️ಶ್ರೀಮತಿ. ಗಿರಿಜಾ ಮಾಲಿಪಾಟೀಲ್ ವಿಜಯಪುರ