ಯಾರೂ ಕೇಳಬಾರದ ಸಂಗತಿ ಹೇಳಬೇಕಿದೆ ಬರುವೆಯಾ ಒಬ್ಬಳೆ
ಗುಟ್ಟಾಗಿ ಹಿಡಿದಿಟ್ಟ ಒಲವನ್ನು ನುಡಿಯಬೇಕಿದೆ ಬರುವೆಯಾ ಒಬ್ಬಳೆ
ಏನೂ ಅರಿಯದ ಮಳ್ಳಿಯ ಹಾಗೆ ನಟಿಸದಿರು ಎಲ್ಲವೂ ನಿನಗರ್ಥವಾಗಿದೆ
ಕಣ್ಣ ಕರೆಯ ಆಹ್ವಾನ ನೋಡು ಇನ್ನೇನೊ ಬೇಕಿದೆ ಬರುವೆಯಾ ಒಬ್ಬಳೆ
ಮಧುರ ರಸಗಳಲ್ಲಿ ಮುತ್ತಿನ ಮಾಲೆ ಹೆಣೆದಿರುವೆ ನಿನಗಾಗಿ ಪ್ರೀಯಸಖಿ
ಕೊರಳ ಬಳಸಿ ಪ್ರೀತಿಯನು ಅಲಂಕರಿಸಬೇಕಿದೆ ಬರುವೆಯಾ ಒಬ್ಬಳೆ
ನಿನ್ನ ರೂಪ ಕಲ್ಪನೆಯ ನನ್ನ ಕನಸುಗಳಿಗೆ ಅನುಕ್ಷಣವು ರಂಗೇರುತಿಹುದು
ನಿನ್ನ ತೋಳ ತೆಕ್ಕೆಯಲ್ಲಿ ಗರಿಬಿಚ್ಚಿ ಹಾರಬೇಕಿದೆ ಬರುವೆಯಾ ಒಬ್ಬಳೆ
ಸುಂದರಿಯ ಕಾಣುವ ಕೌತುಕದ ಹಪಹಪಿಗೆ ನೀರೆರೆದು ಬಿಡು ‘ಆರಾಧ್ಯೆ’
ಚೆಂದುಳ್ಳಿ ಚೆಲುವೆಯನು ಕಣ್ ತುಂಬಿಕೊಳ್ಳಬೇಕಿದೆ ಬರುವೆಯಾ ಒಬ್ಬಳೆ
🌺🌺🌺
ಶ್ರೀಮತಿ ಗಿರಿಜಾ ಮಾಲಿ ಪಾಟೀಲ. ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪೂರ