ಗೆದ್ದೆನೆಂದು ಮೆರೆಯಬೇಡ ಗೆಲುವು ಕ್ಷಣಿಕವೆಂದು ತಿಳಿದುಕೋ
ನೆಲದ ನಂಟು ಕಡೆಗಣಿಸಬೇಡ ಅದೇ ಶಾಶ್ವತವೆಂದು ತಿಳಿದುಕೋ

ಅಂದ ಚೆಂದ ಅನುಗಾಲ ಜೊತೆ ಬರೊಲ್ಲ ಗೊತ್ತಿರಲಿ
ಮನಸು ಕುರೂಪಿಯಾಗಿಸಬೇಡ ಅದೇ ಬಲು ಮುಖ್ಯವೆಂದು ತಿಳಿದುಕೋ

ನಗ ನಾಣ್ಯಗಳು ತಿಜೋರಿ ತುಂಬಿರಬಹುದು ಏನುಪಯೋಗ
ಎದೆಯ ಪ್ರೀತಿ ಬರಿದಾಗಿಸಬೇಡ ಅದೇ ಬದುಕಿನ ಮುಕುಟವೆಂದು ತಿಳಿದುಕೋ

ಬಿರುದು ಸನ್ಮಾನಗಳು ಬಹಳ ದಿನ ಉಳಿಯುವುದಿಲ್ಲ
ಜನಮೆಚ್ಚುಗೆ ಕಳೆದುಕೊಳ್ಳಬೇಡ ಅದೇ ನಿಜವಾದ ಪುರಸ್ಕಾರವೆಂದು ತಿಳಿದುಕೋ

ಎಲ್ಲ ಇದ್ದರೂ ನೆಮ್ಮದಿ ಇಲ್ಲದಿದ್ದರೇನು ಫಲ ‘ನಾಗೇಶಿ’
ಮನಃಶಾಂತಿ ಹಾಳುಮಾಡಿಕೊಳ್ಳಬೇಡ ಅದೇ ಬಾಳಿನ ಗೆಲುವೆಂದು ತಿಳಿದುಕೋ

 ‌‌‌‌     🔆🔆🔆

✍️ಶ್ರೀ ನಾಗೇಶ್ ಜೆ. ನಾಯಕ