ಹುಚ್ಚು ಮನಸ್ಸು ರಚ್ಚೆ ಹಿಡಿದಿದೆ ಹೀಗೆ
ಒಲಿಯದೊಂದು ಹಾಡು ಕಲಿಯಬೇಕೆಂದು;

ಪ್ರೇಮವೆಂದರೆ ಇಷ್ಟೇ 
ದಕ್ಕಿದರೆ ಸರಳ,
ದಕ್ಕದಿದ್ದರೆ ಪಾತಾಳ:
ಬರಿಯ ಹುಡುಕಾಟದ ಬೇಗೆ

ಸಿಕ್ಕದ್ದು ಸಿಹಿಇರಬಹುದೇ?
ಸಿಕ್ಕಿದ್ದು ? ಛೇ ಒಗರು!
ಪುರಸ್ಕಾರಕ್ಕೆ ಬರೀ ತಾತ್ಸಾರ
ತಿರಸ್ಕಾರದೆಡೆಗೆ ತೀರದ ಕಾತರ

ಮುಗಿಲಿಗೇ ಏಣಿ!
ಹತ್ತಿದ ಮೇಲೆ ಏನಿದೆ ನೋಡಲು?
ಮುಗಿದ ಕುತೂಹಲ
ಎಟುಕದ ಸಾಧಾರಣ ಎತ್ತರಕ್ಕೂ
ಮನ ವಿಹ್ವಲ!

ತೊರೆಯುವುದು  ಹೇಗೆ?
ಇರುವುದರಲ್ಲೇ  ಅರಸಲೆ?
ಅರಿಯದುದರೆಡೆಗೇ ಅಮಲು
ಎಲ್ಲಿರುವನೋ ‘ ಅವನು?’

ದಕ್ಕಿದ್ದ ಪ್ರೀತಿ ನಕ್ಕಿತು ಸಣ್ಣಗೆ
ಕಳಕೊಂಡ ಮೇಲೆ ಪರಿತಪಿಸಿ ಫಲವೇನು?
‘ ಅವರು’ ಅವನಾಗಲಾರರೇನು?
ಒಗರು ಒಳ್ಳೆಯದೆ!
ಜಗಿದಾಗ ಚಿಮ್ಮುವುದು ರಸದ ಚಿಲುಮೆ!

************
                         – ನಂದಿನಿ ವಿಶ್ವನಾಥ ಹೆದ್ದುರ್ಗ

                         ( ಒಳಸೆಲೆ ಕವನ ಸಂಕಲನದಿಂದ)