ಹಿಮಾಲಯದೆತ್ತರದ ಮೇರುಪರ್ವತ
ಕಾವ್ಯಗಂಗೆಯ ಹರಿಸಿದರನವರತ
ನಾದದೊಳಗಾಡುವುದೇ ಮತ
ನಾಕುತಂತಿಯ ಎದೆಯೊಳಗೆ ಮೀಟುತ
ದಾಟಿದರು ಸೀಮೆಯ ಕಂಡು ಅನಂತ

ನಾಟ್ಯವಾಡಿದವು ವ್ಯಾಕರಣ ಛಂದ
ಟಂಕಸಾಲೆಯ ಪದಗಳೆಲ್ಲವೂ ಅಂದ
ಗಂಗೆಯನಿಳಿಸಿದ ಭಾರತಿ ಕಂದ
ಭೃಂಗದ ಬೆನ್ನೇರಿದ ಕಲ್ಪನಾನಂದ
ವಿಸ್ಮಯವೋ ಕಟ್ಟಿದ ಭಾವಬಂಧ

ಬದುಕಿಗಾಗಿ ಬೆಂದು ನೊಂದ ಜೀವ
ಒಲವೇ ಬದುಕೆಂದರು ನುಂಗಿ ನೋವ
ಹಾಡಿದವರಿಲ್ಲ ಮಲ್ಲಿಗೆಯ ಆರ್ದ್ರ ಭಾವ
ಸಖಿಗೀತ ರಾಗಿಸಿದರಿವರೇ ಕಾವ್ಯದೇವ
ಚೈತನ್ಯದ ಪೂಜೆಗೈದ ಬ್ರಹ್ಮ ಮಹಾದೇವ


ಬೆಳಗಿಗೊಂದು‌ ಮಹಾ ಬೆಳಗು
ಚಿಟ್ಟೆಗೆಂದರು ಹಚ್ಚೆಯ ಮೊಳಗು
ಕಾವ್ಯ ಮೆರವಣಿಗೆಯಲಿ ಚಂದಿರನೇ ಮಗು
ಉಯ್ಯಾಲೆಯೊಳಗೆ ತೂಗಿತು ಅಮೃತದ ನಗು
ಅಭ್ಯಂಜನದಿ ಸಂತೃಪ್ತಿಆ ಪರಮಗು


ಶ್ರಾವಣದ ಹನಿ ಮುಗಿಲ ಮಾಲೆ
ಅಲಂಕರಿಸಿತಲ್ಲ ಕೊರಳ ಲೀಲೆ
ಪಾತರಗಿತ್ತಿ ಚೆಲುವು ನೋಡಲ್ಲೆ ಬಾಲೆ
    ಮಹೋನ್ನತವೀ ಹೆಣೆದ ಕಲೆಯ ಬಲೆ     ಮುಗಿಲ ಅಭಿಷೇಕಕೆ ಬೆರಗು ಹಸಿರು ಮಲೆ


ರತ್ನದಾ ರಸದ ಕಾರಂಜಿಯ ಕಾಣ್ಕೆ
ಕನಸಿನೊಳಗೊಂದು ಕನಸಿನ ಪೂಣ್ಕೆ
ನರಬಲಿ ನೀಡಿ ದಾಸ್ಯತನದ ಮಾಣ್ಕೆ
ಪ್ರತಿಭೆಯ ಬಯಲಿಗಿಲ್ಲ ಸೀಮೆ ಅಣ್ಕೆ
ಪದಲಲಾಟವೋ ಬಂಗಾರದ ಜಿಣ್ಕೆ

                  ****                                                   —-  ಶ್ರೀ ಚಂದ್ರಶೇಖರ ಹೆಗಡೆ                       ಸಹಾಯಕ  ಪ್ರಾಧ್ಯಾಪಕರು,ಸಪ್ರದಕಾಲೇಜು, ಬೀಳಗಿ