ಮಿಂಚಿನಂಚಿನಲಿ ಹೊಳೆದು ಕರಗಿ
ಸಲಿಲ ದರ್ಪಣದಿ ಕೆಮ್ಮೊಗ ತೋರಿ
ಹೊರಟ ಪಡುವಣದಮನೆಯ ಕಡೆಗೆ
ಕಾಯಕವೇ ಕೈಲಾಸವೆಂದು ಹಂಚಿದ ಬೆಳಕಿನ ದುಡಿಮೆಯ ಜಗಕೆ  
           
ಗಳಿಸಿದ ಪುಣ್ಯವ ದಾಸೋಹಗೈದು          ಮೆರೆದನು ಅನುಭವ ಮಂಟಪದಿ              ಜಾತಿ ಮತಗಳ ತರತಮ ನೂಂಕಿ              ಭುವನದೊಳಗಿನ ಸಕಲರಿಗೆರೆದು               ಬೆಳಗಿದ ಬಾಳಿನ ಜ್ಯೋತಿಯಾಗಿ            ಸಮಸಮಗಳ ನಡುವಿನ ಬಿರುಕನು ಮುಚ್ಚಿ                                                           ಬಿತ್ತಿದ ಬೆಳಕಿನ ಬೆಳೆಯನು ಹೆಣಗಿ

ಪಯಣವದುಶತಮಾನಗಳಾಚೆಗೆ                   ಹಾದಿಗೆಲ್ಲ ಕನಸುಗಳ ಚೆಲ್ಲಿ           
ಸಾಲದೆಂದು ಕಿರಣಗಳ ಬೀರಿ
ತೋರಿದ ಮಾರ್ಗವೇ ಮಾಯ ಮಾಯೆಗೆ
ಗೌರವವೇ  ಸಾಕಿದ ತಂದೆತಾಯಿಗೆ
ಕತ್ತಲೆ ತುಂಬಿದ ಬಿಜ್ಜಳನ ಎದೆಗೆ


ಅರಿವಿನ ಬೆಳಕಿನ ಯೋಗಾಯೋಗ
ಬಂದೊದಗಿದರೂ ದರ್ಪದ ಭೋಗ
ಮುಸ್ಸಂಜೆಯ ಕೆಂಪಿಗೆ ನೆತ್ತರ ತಂಪು
ಕಳೆಯಲಾಗದು ಕ್ರೌರ್ಯದ ಕಮಟು‌ ಕಂಪು
ತೊಳೆಯಲಾಗದು ಮೂಕಸಾಕ್ಷಿ ರವಿಯ ಪೆಂಪು

ಪಾಪ ಕಳೆವ ವಚನಗಳ ಬೆಳಕಿಗೆ
ಸೇರಿಸಿದರೂ ಕಿರಣ ಕಾರಂಜಿಯ‌ ಕೈಗಳ
ತಪ್ಪುವುದೆಂತು ಶರಣರ ಶಾಪ
ನೇಸೆನಿಂದಿಗೂ ಉದಯದಿ ಕೆಂಪು
ಸಂಜೆಯಲಂತೂ ನೆತ್ತರ ರೂಪು

              *****                                                       –ಶ್ರೀ ಚಂದ್ರಶೇಖರ ಹೆಗಡೆ
 ಸಹಾಯಕ ಪ್ರಾಧ್ಯಾಕರು ಸಪ್ರದಕಾಲೇಜು,                 ಬೀಳಗಿ