ಘಮ ಘಮ ಗಮಾಡಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ
ತುಳುಕ್ಯಾಡತಾವ ತೂಕಡಿಕೆ
ಎವಿ ಅಪ್ಪತಾವ ಕಣ್ದುಡುಕಿ
ಕನಸ ತೇಲಿ ಬರತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ…

ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ…

ನೆರಳಲ್ಲಾಡತಾವ ಮರದ ಬುಡಕ
ಕೆರಿ ತೆರಿ ನೂಕತಾವ ದಡಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ…

ನನ್ನ ನಿನ್ನ ಒಂದು ತನದಾಗ
ಹಾಡು ಹುಟ್ಟಿತೊಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ…

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ…
—————————–
ರಚನೆ-ದ.ರಾ.ಬೇಂದ್ರೆ

ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಇಡೀ ಕರ್ನಾಟಕದಾದ್ಯಂತ ಪಸರಿಸಿದ ಕೀರ್ತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಖ್ಯಾತ ಕವಿ ದ.ರಾ.ಬೇಂದ್ರೆಯವರಿಗೆ ಸಲ್ಲುತ್ತದೆ. ತಮ್ಮ ಕಾವ್ಯ ವಲಯದಲ್ಲಿ ಉತ್ತರ ಕರ್ನಾಟಕ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು, ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿದ ಕವಿ ಸ್ತುತ್ಯಾರ್ಹರು. ಬೇಂದ್ರೆಯವರನ್ನು ಶಬ್ಧಮಾಂತ್ರಿಕ ಎಂದರೂ ತಪ್ಪಾಗಲಾರದು. ಅವರು ಕಟ್ಟಿಕೊಡುವ ಕಾವ್ಯದಲ್ಲಿ ಪ್ರತಿಮೆಗಳ ಬಳಕೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಪ್ರತಿ ಕಾವ್ಯದಲ್ಲೂ ಸಹಜವಾಗಿ ಹೊರಹೊಮ್ಮುವ ಪ್ರಾಸಗಳು ಇಡೀ ಪದ್ಯಕ್ಕೆ ಗಾಢ ಅರ್ಥವನ್ನು ಹೊಮ್ಮಿಸಿ ಭಾವನಾತ್ಮಕ ಪ್ರಪಂಚದಲ್ಲಿ ಪ್ರವೇಶಿಸುವಂತೆ ಮಾಡಿ ಬಿಡುತ್ತವೆ.

ಬೇಂದ್ರೆಯವರ ಅಂತಹುದೇ ಒಂದು ಜನಪ್ರಿಯ ಭಾವಗೀತೆ ನಿಮಗಾಗಿ. ಈ ಗೀತೆ ಒಬ್ಬ ಪ್ರೇಯಸಿ ನಟ್ಟಿರುಳಿನಲ್ಲಿ ತನ್ನ ಜೊತೆ ಯಾವುದೋ ಕಾರಣಕ್ಕಾಗಿ ಮುನಿಸಿಕೊಂಡು ಹೊರಟ ನಲ್ಲನ್ನು ಓಲೈಸುವ ಕುರಿತಾಗಿ ಬರೆದುದಾಗಿದೆ. ಈ ಭಾವಗೀತೆಯಲ್ಲಿ ಬೇಂದ್ರೆಯವರ ಜಾನಪದ ಶೈಲಿ, ಆಡುಭಾಷೆಯ ಸೊಗಡು, ಪ್ರತಿಮೆಗಳ ಬಳಕೆ ಗೀತೆಗೆ ಇನ್ನಷ್ಟು ಸೊಬಗನ್ನು ತಂದು ಕೊಟ್ಟಿದೆ.

ಮುಡಿದ ಮಲ್ಲಿಗೆಯ ಘಮ ಕೋಣೆ ತುಂಬ ಹರಡಿರಲು, ಕಣ್ಣಿಗೆ ಎಳೆದು ಕಾಡುವ ನಿದ್ರೆ ಆವರಿಸಿರಲು, ಕನಸುಗಳು ಮೆರವಣಿಗೆ ಹೊರಡುವ ಈ ಹುಣ್ಣಿಮೆಯ ಇರುಳಿನಲಿ ನನ್ನ ಜೊತೆ ಮುನಿಸಿಕೊಂಡು ಹೊರಟಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಯನ್ನು ಪ್ರೇಯಸಿ ತನ್ನ ಪ್ರಿಯತಮನಿಗೆ ಹಾಕುತ್ತಾಳೆ. ಎಂತಹ ಅರ್ಥಪೂರ್ಣ ಸಾಲುಗಳ ಮೂಲಕ ಒಂದು ಸುಂದರ ಚಿತ್ರಣವನ್ನು ಕವಿ ಇಲ್ಲಿ ಕಟ್ಟಿ ಕೊಡುತ್ತಾನೆ ಎಂದರೆ ವರ್ಣಿಸಲು ಪದಗಳು ಸೋತು ಹೋಗುತ್ತವೆ.

ಹುಣ್ಣಿಮೆಯ ರಾತ್ರಿಯಲಿ ಆಕಾಶದ ತುಂಬ ನಕ್ಷತ್ರಗಳು ಹರಡಿಕೊಂಡು ನಲ್ಲೆಯೆಡೆಗೆ ಬೊಟ್ಟು ಮಾಡಿ ತೋರಿಸುತ್ತಿವೆ. ಈ ರಾತ್ರಿ ಸುಮಧುರವಾದುದು. ಇಂತಹ ಇರುಳಿನಲ್ಲಿ ಮುನಿಸು ತರವೆ ಎಂದು ನಲ್ಲನನ್ನು ಕೇಳು ಎನ್ನುತ್ತಿವೆಯೇನೋ ಎಂಬಂತೆ ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಎಂಬರ್ಥದಲ್ಲಿ ಕವಿ ವರ್ಣಇಸುತ್ತಾನೆ. ಅದೇ ಹುಣ್ಣಿಮೆ ಚಂದಿರ ಕವಿಗೆ ಕನ್ನಡಿ ಹರಳಂತೆ ಕಂಡದ್ದು ವಿಶೇಷ. ಇಂತಹುದನ್ನೆಲ್ಲ ಹೇಳುತ್ತಲೆ ಕವಿ ನಲ್ಲೆಯ ಮೂಲಕ, ಮನಸು ನಿನ್ನನ್ನು ಕಂಡು ಮರುಳಾಗಿಬಿಟ್ಟಿದೆ ಇದನ್ನೆಲ್ಲ ನೀನು ಅರ್ತ ಮಾಡಿಕೊಳ್ಳುತ್ತಿಲ್ಲವಲ್ಲ. ಇಂತಹ ಇರುಳು ಕವಿದ ರಾತ್ರಿಯಲಿ ನನ್ನನ್ನು ಒಬ್ಬಂಟಿ ಮಾಡಿ ನೀನು ನಡೆದಿದ್ದಾದರೂ ಎಲ್ಲಿಗೆ ಎಂದು ನಲ್ಲೆ ಪ್ರಶ್ನೆ ಮಾಡುತ್ತಾಳೆ.

ನಿಸರ್ಗದ ಚೆಲುವಿಕೆಯನ್ನು ತನ್ನ ಕಾವ್ಯದಲಿ ಕವಿ ಸೆರೆ ಹಿಡಿದಿರುವ ಬಗೆ ನೋಡಿ. ಹುಣ್ಣಿಮೆ ಬೆಳದಿಂಗಳಲ್ಲಿ ಮರದ ನೆರಳು ಆಟವಾಡುವಂತೆ ಕಾಣುತ್ತದೆ. ಅತ್ತ ತುಂಬಿದ ಕೆರೆ ತೆರೆಗಳನು ದಡಕ್ಕೆ ನೂಕುತ್ತಿದೆ. ಇಂತಹ ಸುಸಮಯದಲಿ ನನ್ನನ್ನು ನಡು ನೀರಲ್ಲಿ ಬಿಟ್ಟು ನೀನು ಹೊರಟಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆ ನಲ್ಲೆಯದು. ಇಲ್ಲಿ ಕವಿ ಬಳಸಿರುವ ಪ್ರಾಸಗಳನ್ನು ಗಮನಿಸಿ ‘ಬುಡಕ, ದಡಕ, ನಡಕ’ ಎಂಬ ಪದಗಳು ಅತ್ಯಂತ ಸಹಜವಾಗಿ ಬಂದಿವೆ. ಇವುಗಳನ್ನು ಉಚ್ಛರಿಸುವಲ್ಲಿ ಲಯಬದ್ಧತೆ ಕಂಡು ಬರುತ್ತದೆ.

‘ನನ್ನ ನಿನ್ನ ಒಂದು ತನದಾಗ,ಹಾಡು ಹುಟ್ಟಿತೊಂದು ಮನದಾಗ’ ಎನ್ನುವಲ್ಲಿ ಕವಿ ಪ್ರೇಯಸಿಯ ಪರಿ ಬಿಚ್ಚಿಡುತ್ತಾನೆ. ನಾವಿಬ್ಬರೂ ಒಂದೇ ದೇಹವಿದ್ದ ಹಾಗೆ. ಒಂದೇ ದೇಹವಿದ್ದಂಥ ನಾವು ಹೀಗೆ ಸಣ್ಣ ಮಾತುಗಳಿಗೆ ಮುನಿಸಿಕೊಳ್ಳುವದು ತರವಲ್ಲ ಎಂಬ ಹೇಳಿಕೆಯನ್ನು ಈ ಸಾಲುಗಳು ಧ್ವನಿಸುತ್ತವೆ. ಈ ರಾತ್ರಿ ವನದಲ್ಲಿ ಬೆಳದಿಂಗಳು ವ್ಯರ್ಥ ಕಳೆದು ಹೋಗುತ್ತಿದೆಯಲ್ಲ, ಹಠ ತೊಟ್ಟು ನೀನು ಹೊರಟು ನಿಂತುದು ನನ್ನ ಮನಸಿನಲ್ಲಿನ ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎಂದು ಕವಿ ಈ ಭಾವಗೀತೆಯಲ್ಲಿ ನಲ್ಲೆಯ ಮೂಲಕ ನಲ್ಲನಿಗೆ ಅರ್ಥೈಸುತ್ತಾರೆ.

ಕೊನೆಯಲ್ಲಿ ಬರುವ ಕವಿತೆಯ ಸಾಲುಗಳು ಧ್ವನಿಸುವ ಅರ್ಥ ಪ್ರೇಯಸಿಯ ಅಸಹಾಯಕತೆಯನ್ನು, ಬೇಸರವನ್ನು ಹೊರಹೊಮ್ಮಿಸುತ್ತವೆ. ಪ್ರೇಯಸಿಯಿಂದ ಏನೋ ಅಚಾತರ್ಯವಾಗಿದೆ, ಅದಕ್ಕೆ ಆಕೆ ನಲ್ಲನಿಗೆ ಕೇಳುತ್ತಾಳೆ, ಎಂದೂ ಇಲ್ಲದ ಈ ಮುನಿಸು ನಿನಗೆ ಇಂದು ಬಂದದ್ದು ಹೇಗೆ, ನೀ ಹೀಗೆ ಮುನಿಸಿಕೊಳ್ಳುವ ಕನಸು ಮೊದಲೇ ಬಿದ್ದಿದ್ದರೆ ನನ್ನ ವರ್ತನೆ ಬದಲಾಗುತ್ತಿತ್ತೋ ಏನೋ? ನನ್ನ ರಾಯ ನಿನ್ನೊಳಗಿನ ಮನಸ್ಸನ್ನು ನಾನು ಅರ್ಥ ಮಾಡಿಕೊಳ್ಳದೆ ಹೋದೆನಲ್ಲ ಎಂಬ ಹಳಹಳಿಕೆ ಕೂಡ ಈ ಸಾಲುಗಳಲ್ಲಿ ಹೊರಹೊಮ್ಮುತ್ತದೆ. ಒಟ್ಟಾರೆ ಕವಿತೆ ರಾತ್ರಿಯ ಸೊಬಗಿನಲಿ ಸಿಟ್ಟಿನಿಂದ ಬಿಟ್ಟೆದ್ದು ಹೊರಟ ನಲ್ಲನನ್ನು ನಲ್ಲೆ ಓಲೈಸಿಕೊಳ್ಳುವದರ ಕುರಿತಾಗಿ ಚಿತ್ರಿತವಾಗಿದೆ.

ತಮ್ಮ ಸಮಗ್ರ ಕಾವ್ಯಗಳಲ್ಲಿ ಉತ್ತರ ಕರ್ನಾಟಕದ ಭಾಷೆಯ ಛಾಪನ್ನು ಪ್ರತಿಬಿಂಬಿಸಿರುವ ದ.ರಾ.ಬೇಂದ್ರೆಯವರು ವಿಶಿಷ್ಠ ಕವಿ.ಅಷ್ಟೇ ಸಮರ್ಪಕವಾಗಿ ಇದಕ್ಕೆ ಸಂಗೀತ ಸಂಯೋಜಿಸಿದ್ದಾರೆ ಗಾನ ಗಾರುಡಿಗ ಸಿ.ಅಶ್ವಥ್ ಅವರು. ಸಂಗೀತಾ ಕಟ್ಟಿ ಅವರ ಜೇನದನಿಯಲ್ಲಿ ಮೂಡಿಬಂದಿರುವ ಈ ಭಾವಗೀತೆ ಒಮ್ಮೆ ಕೇಳಿಸಿಕೊಳ್ಳಿ. ಹೃದಯ ಹಾಯಿ ದೋಣಿಯಲ್ಲಿ ತೇಲಿದಂತಾಗುತ್ತದೆ. ಶಬ್ಧಮಾಂತ್ರಿಕ ದ.ರಾ.ಬೇಂದ್ರೆಗೆ ನಮಸ್ಕಾರ.

*******
—ನಾಗೇಶ್ ಜೆ ನಾಯಕ

    (ಬೇಂದ್ರೆಯವರ ಜನ್ಮದಿನದ ನಿಮಿತ್ತ

ಅವರ ಜನಪ್ರೀಯ ಗೀತೆಯೊಂದನ್ನು ನನ್ನ’ಕವಿ ಸಮಯ’ ಸಂಕಲನದಿಂದ ನಿಮ್ಮ ಓದಿನ ಪ್ರೀತಿಗೆ ಹೆಕ್ಕಿ ಕೊಡುತ್ತಿದ್ದೇನೆ. ಓದಿ, ಇಷ್ಟವಾದರೆ ಅಭಿಪ್ರಯಿಸಿ….)       (ಚಿತ್ರಕೃಪೆ-ಟಿ. ಎಫ್. ಹಾದಿಮನಿ)