ಜನವರಿ ೩೧ ೧೮೯೬ ರಂದು ಧಾರವಾಡದಲ್ಲಿ ಜನಿಸಿದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡ ಸಾಹಿತ್ಯದ ವರಕವಿ, ಅವಧೂತ ಕವಿ ,ಜಾನಪದ ಗಾರುಡಿಗ, ಕರ್ನಾಟಕ ಕವಿಕುಲತಿಲಕ ಎಂದೇ ಪ್ರಸಿದ್ಧರಾದವರು .ಕನ್ನಡ ಕಾವ್ಯ ಪರಂಪರೆಯನ್ನು ಜೀವಂತವಾಗಿ ಮುಂದುವರಿಸುವುದರಲ್ಲಿ ಬೇಂದ್ರೆಯವರ ಪಾತ್ರ ದೊಡ್ಡದು.ಇಳಿದು ಬಾ ತಾಯಿ ಇಳಿದು ಬಾ, ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು, ಎಂದು ಬರೆದ ಬೇಂದ್ರೆ ‘ಬೆಂದರೆ ಬೇಂದ್ರೆ ಆದಾರು’ ಎಂಬ ಮಾತಿನೊಂದಿಗೆ ಬೆಂದವರೆಲ್ಲರೂ ಬೇಂದ್ರೆ ಆಗಲಾರರು ಬೂದಿಯಾದರು ಎಂಬ ಎಚ್ಚರಿಕೆಯನ್ನೂ ನೀಡಿದವರು.ಆರು ಮಕ್ಕಳನ್ನು ಕಳೆದುಕೊಂಡು ಅಪಾರ ದುಃಖ ಸಾಗರ ಕಿತ್ತು ತಿನ್ನುವ ಬಡತನ ಸಂಸಾರದಲಿ ಸಿಲುಕದೆ ಒದ್ದಾಡದೆ ತಪಸ್ವಿಯಾಗಿ ನೋವನ್ನು ಕಾವ್ಯವನ್ನಾಗಿ ಮಾರ್ಪಡಿಸಿದರು.ತಮ್ಮ ಜೀವನವನ್ನು ಜೀವಚೈತನ್ಯದಿಂದ ಹೊರತು ಎಂದು ಭಾವಿಸದೆ ಜೀವ ಜಗತ್ತಿನ ಜೊತೆಗಿನ ಸಂಬಂಧದಲ್ಲಿ ಮನುಷ್ಯ ಜೀವನ ಸಾರ್ಥಕತೆಯನ್ನು ಪಡೆಯಬೇಕೆಂಬುದು ಅವರ ಆಶಯ .
ರಸವೇ ಜನನ ವಿರಸವೇ ಮರಣ ಸಮರಸವೇ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ .ಸಮಾನತೆಯ ಅರಿವು ಅವರ ಕಾವ್ಯದ ಮುಖ್ಯ ಧ್ಯೇಯ ವಾಗಿತ್ತು .ಸಖಿ- ಸುಖ ಸತ್ಯ- ಸಂಬಂಧ ಸುಮಧುರ ಕಾವ್ಯ ಶಬ್ದಗಳ ಮಾಂತ್ರಿಕತೆಯನ್ನು ಬೇಂದ್ರೆ ಕವನ ಗಳಲ್ಲಿ ನೋಡಬಹುದು.ಜೀವನದಲ್ಲಿ ಆಗಲಿ ಸಾಹಿತ್ಯದಲ್ಲಿಯಾಗಲಿ ಬೇಂದ್ರೆಯವರು ಸಮನ್ವಯತೆ, ಸಾಮಂಜಸ್ಯ ಸಾಮರಸ್ಯ ಸೂತ್ರಗಳ ಆರಾಧಕರಾಗಿದ್ದರು. ದೃಶ್ಯಜಗತ್ತನ್ನು ಆಗಲೇ ಭೌತಿಕ ಜೀವನವನ್ನಾಗಲಿ ಅವರೆಂದೂ ಅಲ್ಲಗಳೆದಿಲ್ಲ. ಅದನ್ನು ನೋಡುವ ದೃಷ್ಟಿಯಲ್ಲಿ ಮಾತ್ರ ಕ್ರಾಂತಿಕಾರಕ ಬದಲಾವಣೆ ಬೇಂದ್ರೆಯವರಿಗೆ ಅತ್ಯಂತ ಪ್ರಿಯವಾಗಿದ್ದ ಸಾಂಖ್ಯದ ಭಾಷೆಯಲ್ಲಿ ವಿವರಿಸಿ ನಂತರ ಪುರುಷನ ಅರಿವಿನ ಬೆಳಕಿನಲ್ಲಿ ಪ್ರಕೃತಿ ನಿಜಸ್ವರೂಪವನ್ನು ಕಂಡುಕೊಂಡವರು ಎಂದು ಹೇಳಬಹುದು .
ಸಾಹಿತ್ಯವು ಸಮಾಜ ನಿರಪೇಕ್ಷವಲ್ಲ ಸಾಮಾಜಿಕ ಮನಸ್ಥಿತಿ ಪರಿಸ್ಥಿತಿಗಳಲ್ಲಿ ಜೀವಂತ ಬದಲಾವಣೆ ನಡೆಯುವಾಗಲೇ ಸಾಹಿತ್ಯವು ಜೀವಂತವಾಗುವುದು ಎನ್ನುವುದು ಬೇಂದ್ರೆಯವರ ದೃಢ ನಂಬುಗೆ ಗಲ್ಲೊಂದಾಗಿತ್ತು. ಬದಲಾವಣೆ ಆಧುನಿಕತೆ ನ್ನಾಗಲಿ ಅವರೆಂದೂ ವಿರೋಧಿಸಲಿಲ್ಲ. ಮಾನವ ಕಲ್ಯಾಣದ ಹಂಬಲ ಬಲವಾಗಿ ಕಾಡಿತ್ತು. .ಬೇಂದ್ರೆಯವರ ಕವನಗಳಲ್ಲಿ ಘಟನೆಗಳು ಪ್ರತೀಕಾತ್ಮಕವಾಗಿ ಕಾಣಿಸಿಕೊಳ್ಳುತ್ತವೆ .ಬೇಂದ್ರೆಯವರು ಹಣದ ಹಂಚಿಕೆಯಲ್ಲಿನ ಅನ್ಯಾಯವನ್ನು ವಿರೋಧಿಸಿ ಶೋಷಣೆ ವಿರುದ್ಧ ದನಿಯೆತ್ತಿದರು. ಕ್ರಾಂತಿಯನ್ನು ಪುರಸ್ಕರಿಸಿದರು.ಸಾಮಾಜಿಕ ವಿಚಾರ ಪ್ರಣಾಳಿಕೆಯೆಂದು ಮನುಷ್ಯನ ಜೀವನ ಬೆಳಗಾಗುವುದೆಂದು ನಂಬಿರಲಿಲ್ಲ. ಮಾನವನ ಸ್ವರೂಪವೇ ಬದಲಾಗದ ಹೊರತು ಅವನ ಸಮಾಜ ಬದಲಾಗದು ಎಂಬ ಮನೋಧರ್ಮ ಅವರದು.ಬೆಂದು ಬೂದಿಯಾಗದ ಬೇಂದ್ರೆಯಂತಹ ಬದುಕು, ಪ್ರಜ್ಞೆ, ವರ್ತಮಾನ ಕಾಲದ ಮನುಷ್ಯರಿಗೆ ಅನುಕರಣೆಯ ಮತ್ತು ಆದರ್ಶವಾಗಲಿ .

*******

ಶ್ರೀ‌ ಪ್ರಕಾಶ. ಬಿ

ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿ