ಅಲ್ಲೆಲ್ಲ ನಲಿದ ನಲಿವಿನ ನೆಲೆಯಿದೆ
ಅಲ್ಲಿ ಸಂಭ್ರಮಿಸಿದ ಸಂತಸದ ಸೆಲೆಯಿದೆ
ಇಟ್ಟ ಪುಟ್ಟುಟ್ಟ ತಪ್ಪೆಜ್ಜೆಗಳ ಅಚ್ಚಿದೆ
ಗಟ್ಟಿ ಕಂಬಗಳ ಸುತ್ತಿ ಸುಳಿದ ಸೆಳೆತವಿದೆ
ಕುಡಿದ ಹಾಲಿನ ಉದ್ದಲೋಟವಿದೆ
ಕೂಡಿ ಉಂಡ ದುಂಡು ತಟ್ಟೆಯಿದೆ
ತೊಟ್ಟ ಬಟ್ಟೆಗಳಿಂದಾದ ಕೌದಿಯಿದೆ
ನೆಟ್ಟ ನೋಟದ ಕನ್ನಡಿಯ ಬಿಂಬವಿದೆ
ನಗುವಿನಲೆಯ ಸೆಳೆದ ಗೋಡೆಗಳಿವೆ
ಕುಣಿದು ಕುಪ್ಪಳಿಸಿದ ಪಡಸಾಲೆಯಿದೆ
ಹಾಕುತ್ತಿದ್ದ ರಂಗೋಲಿಯ ಅಂಗಳವಿದೆ
ಸಾಕಿದ ಮುದ್ದಿನ ನಾಯಿ ಬೆಕ್ಕುಗಳಿವೆ
ಆಡಿ ನಲಿದ ಮರೆಯದ ಸ್ನೇಹವಿದೆ
ಕಾಡಿಸಿ, ರಮಿಸಿದ ಅಣ್ಣನ ಪ್ರೇಮವಿದೆ
ಬೆನ್ನ ಕಾಯ್ವ ಬಂಧುವಿನ ಹರಕೆಯಿದೆ
ಚಿನ್ನದ ಮನದ ಅತ್ತಿಗೆಯ ಪ್ರೀತಿಯಿದೆ
ಹೆತ್ತು ಹೊತ್ತು ಸಲಹಿದ ತಾಯ್ಮಡಿಲಿದೆ
ಕುತ್ತೆಮರಿ ಮಾಡಿದಪ್ಪನ ಧೈರ್ಯವಿದೆ
ಅಜ್ಜನ ಸಂಸ್ಕಾರದ ಹಿತ ನುಡಿಗಳಿವೆ
ಅಜ್ಜಿಯ ಪುರಾಣದ ನೀತಿ ಕತೆಗಳಿವೆ
ಎಲ್ಲಕ್ಕೂ ಮಿಗಿಲಾದ ನನ್ನ ಬಾಲ್ಯವಿದೆ
ಕುಗ್ಗದ ಮನದ ಆಶಾಗೋಪುರವಿದೆ
***************
—ಶ್ರೀಮತಿ.ಸವಿತ ಲಿಂಗಾರೆಡ್ಡಿ
ಹುಬ್ಬಳ್ಳಿ