ಶ್ರಾವಣ

ಜೀವ ಭಾವಗಳ‌ ಸಮ್ಮಿಲನ

ಮಿಂಚು (ಸಂಪಾದಕೀಯ)

ಶ್ರಾವಣ ಬ್ಲಾಗ್  ಎಂಬ ಸಾಹಿತ್ಯ ಸೋನೆ

       🌧🌧🌧🌧🌧🌧🌧🌧
   
ಶ್ರಾವಣ ಬಂತು ಕಾಡಿಗೆ|ಬಂತು ನಾಡಿಗೆ| ಬಂತು ಬೀಡಿಗೆ| ಬಂತು ಶ್ರಾವಣ||ಪ||

ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
ಕುಣಿದಾವ ಗಾಳಿ|ಭೈರವನ ರೂಪ ತಾಳಿ||

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯ ಪಟ್ಟಕ್ಕ| ಬಾನಮಟ್ಟಕ್ಕ|
ಏರ್ಯಾದ ಮುಗಿಲು|ರವಿ ಕಾಣೆ ಹಾಡೆಹಗಲು||

     ಕನ್ನಡ ಕಾವ್ಯಲೋಕದ‌ ಶಬ್ದ ಗಾರುಡಿಗ, ಕಾವ್ಯ ಮಾಂತ್ರಿಕ ವರಕವಿ ದ.ರಾ.ಬೇಂದ್ರೆ ಯವರು ಬರೆದ ಕವಿತೆಯ ಸಾಲುಗಳಿವು. ಈ ಕವಿತೆ 1946 ರರಲ್ಲಿ ಪ್ರಕಟಗೊಂಡ ಹಾಡುಪಾಡು ಕವನ ಸಂಕಲನದಲ್ಲಿ ಪ್ರಕಟವಾಗಿದೆ. 

ಬೇಂದ್ರೆಯವರು  ಮೂಲತ: ನಮ್ಮ ಗದಗ ಜಿಲ್ಲೆಯ ಶಿರಹಟ್ಟಿಯವರು. ಇವರು 31/01/1896 ಧಾರವಾಡದಲ್ಲಿ ಜನಿಸಿದರು.   ಪ್ರಸ್ತುತ 2021ನೇ ಅಸ್ವಿ ಜ್ಞಾನಪೀಠಪ್ರಶಸ್ತಿ ವಿಜೇತರಾದ  ಅಂಬಿಕಾತನಯದತ್ತರ 125ನೇ ಜನ್ಮದಿನಾಚರಣೆಯ ವರ್ಷ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಗರಿ,ನಾದಲೀಲೆ, ಸಖಗೀತ, ಹಾಡುಪಾಡು, ಶ್ರಾವಣ, ಒಲವೆ ನಮ್ಮ ಬದುಕು, ಹಾಗೂ ಇತರ ಕವನ ಸಂಕಲನದ ಜಾನಪದ ಸೊಗಡಿನ ವಿಶಿಷ್ಠವಾದ, ಭಾವಗೀತಾತ್ಮಕ ವಾದ,ಅದ್ಭುತವಾದ  ಕಾವ್ಯಗಳ ಮೂಲಕ ಹಾಗೂ ನಾಟಕ, ವಿಮರ್ಶೆ, ಅನುವಾದ, ಹಾಗೂ ಸಂಪಾದಿತ ಕೃತಿಗಳ ಮೂಲಕ, ಮತ್ತು ತಮ್ಮ ವಾಗ್ಝರಿಯ ಮೂಲಕ ಕಿರಿಯರಿಂದ ಹಿರಿಯರವರೆಗೆ ಹಳೆಯ ತಲೆಮಾರಿನಿಂದ ಹೊಸತಲೆಮಾರಿನವರೆಗೆ ತಮ್ಮದೇ ಆದ ಪ್ರಭಾವ ಬೀರಿ                      ” ಕರ್ನಾಟಕ ಕವಿಕುಲ ತಿಲಕ ” ಎಂದು ಬಿರುದಾಂಕಿತರಾದ, ವಿವಿಧ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಭಾರತ ಸರಕಾರದಿಂದ ಕೇಂದ್ರಸಾಹಿತ್ಯ ಅಕಾಡೆಮಿ,‌ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಬೇಂದ್ರೆಯವರ ಸ್ಮರಣೆಯೊಂದಿಗೆ  ” ಶ್ರಾವಣ” ಬ್ಲಾಗ್ ಪ್ರಾರಂಭಿಸಲು ಸಂತೋಷವೆನಿಸುತ್ತದೆ.

      ಬಹಳ ವರ್ಷಗಳಿಂದ ಸಾಹಿತ್ಯ ಪತ್ರಿಕೆಗಳ ಬಗೆಗೆ ತುಂಬ ಆಸಕ್ತಿ ಹಾಗೂ ಕುತೂಹಲ ಇತ್ತು. ಹವ್ಯಾಸಕ್ಕಾಗಿ ಇಂತಹ ಒಂದು ಪತ್ರಿಕೆ ತೆರೆಯಬೇಕೆಂಬ ಆಸೆಯೂ ಆಗಾಗ ಮೂಡುತ್ತಿತ್ತು. ಕೆಲಸದ ಒತ್ತಡ ಹಾಗೂ ಸಮಯದ ಅಭಾವ ಹಾಗೂ ಇನ್ನಿತರೆ ಕಾರಣಗಳಿಂದ ಅದು ಸಾಧ್ಯವಿರ ಲಿಲ್ಲ.  ಆ  ಆಸೆ  ಆಸೆಯಾಗಿಯೇ ಉಳಿಯುತ್ತಿತ್ತು. ಆದರೆ ಆಧುನಿಕ‌ ಜಗತ್ತು ಕಂಪ್ಯೂಟರ್ ಯುಗಕ್ಕೆ ಡಿಜಿಟಲ್ ಯುಗಕ್ಕೆ ಅಡಿ ಇಟ್ಟಿರುವ ಈ ಸಮಯದಲ್ಲಿ ಒಂದು ಡಿಜಿಟಲ್ ಪತ್ರಿಕೆಯನ್ನು ಮಾಡುವ ಸಾಧ್ಯತೆ  ತೋರಿತು. ಈಗಾಗಲೇ ಹಲವು ಬ್ಲಾಗ್ ಗಳು ತಮ್ಮ ಅರ್ಥಪೂರ್ಣ ಚಟುವಟಿಕೆಗಳ ಮೂಲಕ  ಕನ್ನಡ ಸಾಹಿತ್ಯ ಜಗತ್ತಿಗೆ ಕೊಡುಗೆ ನೀಡುತ್ತಿವೆ. ಇತ್ತೀಚೆಗೆ ಸಮಾನ ಮನಸ್ಕರ ಸಾಹಿತ್ಯಾಸಕ್ತ ಮಿತ್ರರು ಹಾಗೂ ಕೆಲವು ಹಿತೈಶಿಗಳನ್ನು ಸೇರಿಸಿಕೊಂಡು  ಸಾಹಿತ್ಯ ಹಾಗೂ ಇತರ ಜ್ಞಾನಗಳ ಓದು ಬರಹದ ಅಭಿರುಚಿ ಹೆಚ್ಚಿಸುವ ಉದ್ದೇಶ ದಿಂದ  ಒಂದು ಬ್ಲಾಗ್ ಪ್ರಾರಂಭಿಸುವ ಹಂಬಲ ತೀವ್ರವಾಗತೊಡ ಗಿತು. ಗೆಳೆಯರ ಗುಂಪನ್ನು ಸ್ಥಾಪಿಸಿ ಯವಮಿತ್ರರ ಸಾಹಿತ್ಯ  ಆಸಕ್ತಿ ಹಾಗೂ ಅಭಿರುಚಿಗೆ ವೇದಿಕೆ ಕಲ್ಪಿಸಿದ ಬೇಂದ್ರೆಯವರ 125 ನೇ ಜನ್ಮ ದಿನಾಚರಣೆ ವರ್ಷದ ಈ ಸುಸಂದರ್ಭದಲ್ಲಿ ಬ್ಲಾಗ್ ಪ್ರಾರಂಭಿಸಲು ನಿರ್ಧರಿಸಿದೆ. ಶ್ರಾವಣ ಮಾಸದ ಸಮಯದಲ್ಲಿ ನಿಸರ್ಗ ವೈಭವ ಹಾಗೂ ಮಳೆಯಿಂದ ಪ್ರಭಾವಿತರಾಗಿದ್ದ ಬೇಂದ್ರೆಯವರು ಶ್ರಾವಣದ ಕುರಿತಾಗಿ ಹಲವಾರು ಅರ್ಥಪೂರ್ಣ ಕವಿತೆಗಳನ್ನು ಬರೆದಿದ್ದಾರೆ. ಧಾರವಾಡದ ಹಸಿರು ಪರಿಸರ, ಶ್ರಾವಣದ ಕಳೆ ಹಾಗೂ ಮಳೆ ಅವರ ಕಾವ್ಯರಚನೆಗೆ ಅಪಾರ ಪ್ರೇರಣೆ ನೀಡಿದ ಅಂಶಗಳಾಗಿ ದ್ದವು. ಶ್ರಾವಣದ ಬಗೆಗಿನ ವ್ಯಾಮೋಹ ದಿಂದಾಗಿಯೇ  ಬೇಂದ್ರೆಯರು ಶ್ರಾವಣದ ಪ್ರತಿಭೆ ಎಂದು ಗುರುತಿಸಲ್ಪಡುತ್ತಾರೆ. ಹಲವಾರು ಹಬ್ಬಹರಿದಿನಗಳನ್ನು ಹೊಂದಿರುವ, ಮಳೆಯಿಂದ‌ ಇಳೆಯನ್ನು ಶ್ರಾವಣ ಆಧ್ಯಾತ್ಮಿಕವಾಗಿ, ಸಾಹಿತ್ಯಿಕವಾಗಿ ಎಲ್ಲರ ಮನಸ್ಸನ್ನೂ ಮುದಗೊಳಿಸುವ ಶಕ್ತಿಯನ್ನು ಹೊಂದಿದೆ. ಈ ಕಾರಣ ಗಳಿಂದಾಗಿ ನಮ್ಮ ಬ್ಲಾಗ್ ಗೆ ಶ್ರಾವಣ ಎಂಬ ಹೆಸರು ಹೆಚ್ಚು  ಅರ್ಥಪೂರ್ಣವಾಗುತ್ತದೆ ಎಂಬ ಉದ್ದೇಶದಿಂದ ” ಶ್ರಾವಣ ”  ಎಂದು ನಾಮಕರಣ ಮಾಡಲಾಗಿದೆ. 

      ಅವಿಭಜಿತ  ಧಾರವಾಡ ಜಿಲ್ಲೆ ಕನ್ನಡ ನಾಡಿಗೆ ಹಲವಾರು ಕವಿ, ಸಾಹಿತಿಗಳನ್ನು ನೀಡಿದೆ.ಹಳೆಯ ಹಾಗೂಹೊಸತಲೆಮಾರಿನ  ಹಲವಾರು ಲೇಖಕರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡದ ಸಾಹಿತ್ಯ ಕ್ಷೇತ್ರವನ್ನು ಸಂಪದ್ಭರಿತಗೊಳಿಸುತ್ತಿದ್ದಾರೆ. ವಿದೇಶದಲ್ಲಿದ್ದರೂ ಮಾತೃಭೂಮಿ ಹಾಗೂ ಮಾತೃಭಾಷೆಯ ಮೇಲಿನ ಅಪಾರ ಪ್ರೀತಿ ಹಾಗೂ ಅಭಿಮಾನಗಳಿಂದ ಸಾಹಿತ್ಯ ರಚನೆ ಮಾಡುವ ಹಲವಾರು ಜನರಿದ್ದಾರೆ. ಹಿರಿಯ ಬರಹಗಾರರ ಬರಹಗಳನ್ನು ದಾಖಲಿಸಬೇಕು, ಕಿರಿಯ,ಉದಯೋನ್ಮುಖ ಬರಹಗಾರರಿಗೆ, ಸ್ನೇಹಿತರಿ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು ಹಾಗೂ ದೇಶ ವಿದೇಶಗಳಲ್ಲಿ ರುವ ಕನ್ನಡಿಗರನ್ನು ಈ ಶ್ರಾವಣ ಬ್ಲಾಗ್ ಗೆ ಬರೆಯಲು ಆಹ್ವಾನಿಸುವ ಮೂಲಕ ಆ ಪ್ರದೇಶಗಳ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಹಾಗೂ ಇತರ ಕ್ಷೇತ್ರಗಳ ನೈಜ ಪರಿಚಯವನ್ನೂ ಇಲ್ಲಿರುವವರಿಗೆ ದೊರಕಿಸಬೇಕು ಎಂಬ ಮಹದಾಸೆಯಿಂದ ಈ ಬ್ಲಾಗ್ ಪ್ರಾರಂಭಿಸಲಾಗಿದೆ. ಕೇವಲ ಸಾಹಿತ್ಯ ಮಾತ್ರವಲ್ಲದೇ ವಿಜ್ಞಾನ- ತಂತ್ರಜ್ಞಾನ, ವೈದ್ಯಕೀಯ, ಪರಿಸರ, ಕೃಷಿ ಹೀಗೆ ಹತ್ತು ಹಲವು ಜ್ಞಾನಶಿಸ್ತುಗಳ ಬಗೆಗಿನ ಮಾಹಿತಿಯನ್ನು ಕೂಡ ಓದುಗರಿಗೆ ಒದಗಿಸಬೇಕು ಎಂಬ ಉದ್ದೇಶದಿಂದ ಬ್ಲಾಗ್ ನಲ್ಲಿ ಹಲವಾರು ವಿಭಾಗಗಳನ್ನೂ ಕೂಡ ಸೃಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಉದ್ದೇಶಗಳು ಸನ್ಮಿತ್ರರ, ಹಿತೈಶಿಗಳ, ಸಾಹಿತ್ಯಾಸಕ್ತ ಬರಹಗಾರರ, ಸಹೃದಯಿಗಳ ಹಾಗೂ ಓದುಗರ ಸಹಕಾರ, ಪ್ರೊತ್ಸಾಹ ಮತ್ತು ಬೆಂಬಲಗಳಿಂದ ಈಡೇರುತ್ತವೆ ಎಂಬ ಭರವಸೆಯನ್ನು ಹೊಂದಿದ್ದೇನೆ. 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಸಾಹಿತ್ಯಕ್ಕೆ ಹೊಸಯುಗದ ಈ ಡಿಜಿಟಲ್ ಪತ್ರಿಕೆಯ ಮೂಲಕ ಅಳಿಲು ಸೇವೆ ಸಲ್ಲಿಸಲು ತಾವೆಲ್ಲ ಪ್ರೀತಿ,ವಿಶ್ವಾಸ, ಅಭಿಮಾನದಿಂದ‌ ಅವಕಾಶ ನೀಡುತ್ತೀರಿ ಹಾಗೂ ಶ್ರಾವಣದೊಡನೆ‌ ಕೈಜೋಡಿಸುತ್ತೀರಿ ಎಂದು ನಂಬಿದ್ದೇನೆ. ಶ್ರಾವಣ ಬ್ಲಾಗ್ ನಲ್ಲಿ ತಮ್ಮೆಲ್ಲರ ಸಾಹಿತ್ಯದ ವೈವಿಧ್ಯಮಯ ಬರಹಗಳು ಸದಾ ಸೋನೆಯಂತೆ ಸುರಿಯಲಿ, ವಿವಿಧ ಜ್ಞಾನಗಳು ಝರಿಯಂತೆ‌ ಸದಾ ಹರಿಯುತ್ತಿರಲಿ ಎಂಬ ಆಶಯದೊಂದಿಗೆ….

                                          ನಿಮ್ಮ
                                       ರವಿಶಂಕರ
%d bloggers like this: